ಪಾಕ್ ಪರ ಘೋಷಣೆ ಕೂಗಿದ್ದು ನಿಜ; ಆರೋಪಿ ಪತ್ತೆಗೆ ತಯಾರಿ
ಬೆಂಗಳೂರು; ರಾಜ್ಯಸಭಾ ಚುನಾವಣೆ ಫಲಿತಾಂಶದ ನಂತರ ವಿಧಾನಸೌಧದಲ್ಲಿ ಕಾಂಗ್ರೆಸ್ ವಿಜಯೋತ್ಸವದ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ ಪ್ರಕರಣದ ಎಫ್ ಎಸ್ ಎಲ್ ವರದಿ ಬಹಿರಂಗವಾಗಿದೆ. ಆರೋಪದಂತೆ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿರುವುದು ಎಫ್ ಎಸ್ ಎಲ್ ಪರೀಕ್ಷೆಯಲ್ಲಿ ದೃಢವಾಗಿದೆ. ವಾಯ್ಸ್ ಮ್ಯಾಚ್ ಮಾಡಲಾಗುತ್ತಿದ್ದು, ಆರೋಪಿಯನ್ನು ಬಂಧಿಸಲು ಪೊಲೀಸರು ಸಕಲ ತಯಾರಿ ನಡೆಸಿದ್ದಾರೆ. ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಸೀರ್ ಹುಸೇನ್ ಗೆಲುವು ಸಾಧಿಸಿದ್ದರು. ಅವರಿಗೆ ಅಭಿನಂದನೆ ಸಲ್ಲಿಸಲು ವಿಧಾನಸೌಧಕ್ಕೆ ಬಂದಿದ್ದ ಬೆಂಬಲಿಗರು ಘೊಷಣೆಗಳನ್ನು ಕೂಗಿದ್ದರು. ಈ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ವಿಡಿಯೋವೊಂದು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಹೀಗಾಗಿ ಸರ್ಕಾರದ ವಿರುದ್ಧ ವಿಕ್ಷಗಳು ಮುಗಿಬಿದ್ದಿದ್ದವು. ಸರ್ಕಾರ ವಿಡಿಯೋವನ್ನು ಎಫ್ ಎಸ್ ಎಲ್ ಗೆ ಕಳುಹಿಸಿತ್ತು. ಎಫ್ ಎಸ್ ಎಲ್ ವರದಿ ಸರ್ಕಾರದ ಕೈಸೇರಿದೆ. ಈ ವರದಿಯಲ್ಲಿ ನಾಸಿರ್ ಸಾಬ್ ಜಿಂದಾಬಾದ್ ಹಾಗೂ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಆಡಿಯೋ ಹಾಗೂ ವಿಡಿಯೋವನ್ನು ಎಡಿಟ್ ಮಾಡಿಲ್ಲ. ಪಾಕ್ ಪರ ಘೋಷಣೆ ಕೂಗಿರುವುದು ನಿಜ ಎಂದು ಎಫ್ ಎಸ್ ಎಲ್ ಪರೀಕ್ಷೆ ವೇಳೆ ದೃಢಪಟ್ಟಿದೆ ಎಂದು ಹೇಳಲಾಗುತ್ತಿದೆ.
ವಾಯ್ಸ್ ಮ್ಯಾಚ್ ಆದರೆ ಬಂಧನ;
FSL ವರದಿ ಬಂದ ನಂತರ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ತನಿಖೆ ಚುರುಕುಗೊಳಿಸಿದ್ದು, ಅನುಮಾನಿತ ವ್ಯಕ್ತಿಗಳ ಧ್ವನಿ ಸಂಗ್ರಹ ಮಾಡಲಾಗಿದೆ. ವಿಡಿಯೋದಲ್ಲಿನ ಧ್ವನಿಗೂ ಇದಕ್ಕೂ ಮ್ಯಾಚ್ ಮಾಡಲಾಗುತ್ತಿದೆ. ಅನುಮಾನಿತರಲ್ಲಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ವಾಯ್ಸ್ ಮ್ಯಾಚ್ ಆದರೆ, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ.
ಇದುವರೆಗೆ 7 ಮಂದಿ ವಿಚಾರಣೆ, 19 ಮಂದಿ ಬಾಕಿ;
ಪ್ರಕರಣವನ್ನು ವಿಧಾನಸೌಧ ಠಾಣೆ ಪೊಲೀಸರು ಇದುವರೆಗೆ 7 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಧ್ವನಿ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ಇದರಲ್ಲಿ ಮೂವರ ವಾಯ್ಸ್ ಸ್ಯಾಪಲ್ ಅನ್ನು ಎಫ್ ಎಸ್ ಎಲ್ ತಜ್ಞರಿಗೆ ಕಳುಹಿಸಿ, ವಾಯ್ಸ್ ಮ್ಯಾಚ್ ಆಗುತ್ತಾ ಎಂಬುದರ ಪರೀಕ್ಷೆ ನಡೆಸಲಾಗುತ್ತಿದೆ. ಇನ್ನು ಸ್ಥಳದಲ್ಲಿದ್ದವರ ಪೈಕಿ 26 ಮಂದಿಯ ಹೆಸರನ್ನು ಪೊಲೀಸರು ಪಟ್ಟಿ ಮಾಡಿದ್ದರು. ಹೀಗಾಗಿ ಉಳಿದ 19 ಮಂದಿಯನ್ನು ಕರೆಸಿ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.