ಶಿವಪುರ-ಫುಲ್ವಾರಿಯಾ-ಲಹರ್ತಾರಾ ಮಾರ್ಗ ವೀಕ್ಷಿಸಿದ ಪ್ರಧಾನಿ ಮೋದಿ
ವಾರಾಣಸಿ; ತುಂಬಾ ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ವಾರಾಣಸಿಗೆ ಆಗಮಿಸಿದ್ದಾರೆ. ನಿನ್ನೆ ತಡರಾತ್ರಿ ಅವರು ಶಿವಪುರ-ಫುಲ್ವಾರಿಯಾ-ಲಹರ್ತಾರಾ ಮಾರ್ಗ ವೀಕ್ಷಣೆ ಮಾಡಿದ್ದಾರೆ. ಈ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಾಥ್ ನೀಡಿದ್ದಾರೆ. ಕಳೆದ ರಾತ್ರಿ 11 ಗಂಟೆ ಸಮಯದಲ್ಲಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್, ಹೊಸ ಮಾರ್ಗದಲ್ಲಿ ನಡೆದುಕೊಂಡು ಓಡಾಡಿದರು. ಈ ವೇಳೆ ಪ್ರಧಾನಿಯನ್ನು ನೋಡಲು ಮನೆಗಳ ಮೇಲೆ ಸಾವಿರಾರು ಜನರು ನಿಂತಿದ್ದರು.
ಶಿವಪುರ-ಫುಲ್ವಾರಿಯಾ-ಲಹರ್ತಾರಾ ಮಾರ್ಗವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು. ವಿಮಾನ ನಿಲ್ದಾಣ, ಲಕ್ನೋ, ಅಜಂಗಢ ಮತ್ತು ಘಾಜಿಪುರದ ಕಡೆಗೆ ಹೋಗಲು ಇದು ಸಹಕಾರಿಯಾಗುತ್ತದೆ. ದಕ್ಷಿಣ ಭಾಗ, BHU, BLW, ಇತ್ಯಾದಿಗಳ ಸುತ್ತಲೂ ವಾಸಿಸುವ ಸುಮಾರು 5 ಲಕ್ಷ ಜನರಿಗೆ ಈ ಮಾರ್ಗ ಅನುಕೂಲವಾಗುತ್ತದೆ ಎಂದು ತಿಳಿದುಬಂದಿದೆ.
360 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮಾರ್ಗ ನಿರ್ಮಾಣ ಮಾಡಲಾಗಿದೆ. ಇದು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು BHU ನಿಂದ ವಿಮಾನ ನಿಲ್ದಾಣದ ಕಡೆಗೆ ಪ್ರಯಾಣದ ದೂರವನ್ನು 75 ನಿಮಿಷಗಳಿಂದ 45 ನಿಮಿಷಗಳಿಗೆ ಕಡಿಮೆ ಮಾಡುತ್ತಿದೆ. ಅದೇ ರೀತಿ ಲಹರ್ತಾರಾದಿಂದ ಕಚಹ್ರಿಗೆ ಇರುವ ಅಂತರವನ್ನು 30 ನಿಮಿಷದಿಂದ 15 ನಿಮಿಷಗಳಿಗೆ ಕಡಿಮೆ ಮಾಡುತ್ತಿದೆ.
ಈ ಯೋಜನೆಯು ವಾರಣಾಸಿಯ ನಾಗರಿಕರಿಗೆ ಜೀವನ ಸೌಕರ್ಯವನ್ನು ಹೆಚ್ಚಿಸಲು ರೈಲ್ವೆ ಮತ್ತು ರಕ್ಷಣಾ ಸೇರಿದಂತೆ ಅಂತರ-ಸಚಿವಾಲಯದ ಸಮನ್ವಯವನ್ನು ಕಂಡಿತು.