BengaluruPolitics

Gandhi Statue; ವಿಧಾನಸೌಧದ ಗಾಂಧಿ ಫುಲ್‌ ಬ್ಯುಸಿ, ಎಂಜಿ ರಸ್ತೆಯ ಗಾಂಧಿ ಅನಾಥ!

ಬೆಂಗಳೂರು; ಬೆಂಗಳೂರಿನಲ್ಲಿ ಪ್ರತಿಭಟನೆ ಅಂದ್ರೆ ಸಾಕು ನೆನಪಾಗೋದು ಗಾಂಧಿ ಪ್ರತಿಮೆ (Gandhi Statue). ಯಾವುದೇ ಸಂಘಟನೆ, ರಾಜಕೀಯ ಪಕ್ಷ ಧರಣಿ ನಡೆಸಬೇಕಾದರೆ ಆಯ್ಕೆ ಮಾಡೋದು ಗಾಂಧಿ ಪ್ರತಿಮೆಯನ್ನು. ಏಳುಂಟು ವರ್ಷಗಳು ಹಿಂದಕ್ಕೆ ಹೋದರೆ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಅಂದ್ರೆ ನಮಗೆ ನೆನಪಾಗುತ್ತಿದ್ದದ್ದು ಎಂಜಿ ರಸ್ತೆಯಲ್ಲಿ ನಿಂತಿರುವ ಗಾಂಧಿ ಪ್ರತಿಮೆ, ಇಲ್ಲದಿದ್ದರೆ ಮೌರ್ಯ ಸರ್ಕಲ್‌ನಲ್ಲಿ ಕೂತಿರುವ ಗಾಂಧಿ. ಈ ಎರಡು ಗಾಂಧಿ ಪ್ರತಿಮೆಗಳ ಬಳಿಯೇ ಎಲ್ಲರೂ ಪ್ರತಿಭಟನೆ ಮಾಡುತ್ತಿದ್ದರು. ಆದ್ರೆ ಈಗ ಎರಡೂ ಗಾಂಧಿಗಳು ಅನಾಥವಾಗಿದ್ದಾರೆ. ವಿಧಾನಸೌಧ ಹಾಗೂ ವಿಕಾಸಸೌಧದ ಮಧ್ಯೆ ಹೊಸ ಗಾಂಧಿ ಧ್ಯಾನಕ್ಕೆ ಕುಳಿತ ಮೇಲೆ ಎಂಜಿ ರಸ್ತೆ ಗಾಂಧಿ ಹಾಗೂ ಮೌರ್ಯ ಸರ್ಕಲ್‌ ಗಾಂಧಿ ಅನಾಥರಾಗಿಬಿಟ್ಟಿದ್ದಾರೆ. 

ನೂರಾರು ಪ್ರತಿಭಟನೆಗಳು, ಧರಣಿಗಳು! (MG Road gandhi, Mourya circle gandhi)

ರಾಜಕೀಯ ಪಕ್ಷಗಳು ವರ್ಷ ಪೂರ್ತಿ ಧರಣಿ ಪ್ರತಿಭಟನೆಗಳು ನಡೆಸುತ್ತಲೇ ಇರುತ್ತವೆ. ಬಿಜೆಪಿ ಸರ್ಕಾರ ಇದ್ದಾಗ ಕಾಂಗ್ರೆಸ್‌ ನಾಯಕರು ಹೆಚ್ಚಾಗಿ ಪ್ರತಿಭಟನೆ ಮಾಡುತ್ತಾರೆ. ಕಾಂಗ್ರೆಸ್‌ ಸರ್ಕಾರ ಇದ್ದಾಗ ಬಿಜೆಪಿ ನಾಯಕರು ಪ್ರತಿಭಟನೆಗೆ ಇಳಿಯುತ್ತಾರೆ. ಇವತ್ತು ಕೂಡಾ ಬಿಜೆಪಿ ನಾಯಕರು ವಿಧಾನಸೌಧದ ಆವರಣದಲ್ಲಿರುವ  ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡಿದರು. ಬರ ಪರಿಹಾರ ಕೊಡದೇ ಇರುವುದು ಸೇರಿದಂತೆ ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಇಂದು ಪ್ರತಿಭಟನೆ ಮಾಡಿದರು. ಆದ್ರೆ, ಏಳೆಂಟು ವರ್ಷ ಹಿಂದಕ್ಕೆ ಹೋದರೆ ಇದೇ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಬೇಕು ಅಂದ್ರೆ, ಮೌರ್ಯ ಸರ್ಕಲ್‌ನಲ್ಲಿರುವ ಗಾಂಧಿ ಪ್ರತಿಮೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು.

ಬೆಳಗ್ಗೆ 10 ಗಂಟೆಗೆ ಮೌರ್ಯ ಸರ್ಕಲ್‌ ಗಾಂಧಿ ಪ್ರತಿಮೆ ಬಳಿ ಸೇರುತ್ತಿದ್ದ ನಾಯಕರು ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸುತ್ತಿದ್ದರು. ಗಾಂಧಿ ಜೊತೆ ಫೋಟೋ ತೆಗೆಸಿಕೊಂಡು ಮಾಧ್ಯಮಗಳಿಗೆ ಕೊಟ್ಟು ಮನೆಗೆ ತೆರಳುತ್ತಿದ್ದರು. ಆದ್ರೆ ಅವರೆಲ್ಲಾ ಈಗ ವಿಧಾನಸೌಧ ಹಾಗೂ ವಿಕಾಸ ಸೌಧದ ಮಧ್ಯೆ ಆಸೀನರಾಗಿರುವ ಗಾಂಧಿ ಪ್ರತಿಮೆ ಬಳಿ ಠಿಕಾಣಿ ಹೂಡೋದಕ್ಕೆ ಶುರು  ಮಾಡಿದ್ದಾರೆ.

ಇನ್ನು ಕಾಂಗ್ರೆಸ್‌ ಸೇರಿ ಬಹುತೇಕ ಪಕ್ಷಗಳು ಎಂಜಿ ರಸ್ತೆಯಲ್ಲಿರುವ ನಿಂತಿರುವ ಗಾಂಧಿ ಪ್ರತಿಮೆ ಬಳಿ ಯಾವಾಗಲೂ ಪ್ರತಿಭಟನೆ ನಡೆಸುತ್ತಿದ್ದರು. ಆದ್ರೆ ಇತ್ತೀಚಿನ ದಿನಗಳ ಅಲ್ಲಿನ ಗಾಂಧಿಯನ್ನು ವಿಚಾರಿಸಿಕೊಳ್ಳುವವರೇ ಇಲ್ಲ. ಹಲವು ವರ್ಷಗಳಿಂದ ಅಲ್ಲಿ ಪ್ರತಿಭಟನೆಗಳೇ ನಡೆಯುತ್ತಿಲ್ಲ. ಎಲ್ಲರಿಗೂ ಹೊಸ ಗಾಂಧಿಯೇ ಇಷ್ಟವಾಗಿಬಿಟ್ಟಿದ್ದಾರೆ.

ಬರುತ್ತಿದ್ದ ಹಾರ ತುರಾಯಿಗಳೂ ಈಗ ಇಲ್ಲ

ಪ್ರತಿಭಟನೆಗಳು ನಡೆಯುತ್ತಿದ್ದಾಗ ಎಂಜಿ ರಸ್ತೆ ಹಾಗೂ ಮೌರ್ಯ ಸರ್ಕಲ್‌ನ ಗಾಂಧಿ ಪ್ರತಿಮೆಗಳಿಗೆ ಹಾರ ತುರಾಯಿಗಳು ಹಾಕುತ್ತಿದ್ದರು. ಪ್ರತಿಭಟನಾಕಾರರು ಗಾಂಧಿ ಪ್ರತಿಮೆಗೆ ಹಾರ ಹಾಕಿ ಪೂಜೆ ಮಾಡಿದ ನಂತರವೇ ಪ್ರತಿಭಟನೆ ಆರಂಭಿಸುತ್ತಿದ್ದರು. ಆದ್ರೆ ಈಗ ಈ ಎರಡೂ ಪ್ರತಿಮೆಗಳಿಗೆ ಹಾರ ಹಾಕುವವರೇ ಇಲ್ಲ. ಆರೇಳು ವರ್ಷದ ಮೊದಲು ಈ ಪ್ರತಿಮೆಗಳಿಗೆ ದಿನವೂ ಹೊಸ ಹೊಸ ಹಾರಗಳು ಬೀಳುತ್ತಿದ್ದವು. ಆದ್ರೆ, ಈಗ ಈ ಎರಡೂ ಹಳೇ ಗಾಂಧಿಗಳು ಅನಾಥರಾಗಿದ್ದಾರೆ. ಇವರು ಹೊಸ ಗಾಂಧಿ ಬಗ್ಗೆ ಬೇಜಾರು ಮಾಡಿಕೊಂಡಿದ್ದಾರೇನೋ ಅನಿಸುತ್ತೆ.. ಆ ಮಟ್ಟಿಗೆ ಎಂಜಿ ರಸ್ತೆ ಹಾಗೂ ಮೌರ್ಯ ಸರ್ಕಲ್‌ ಗಾಂಧಿಗಳನ್ನು ನಮ್ಮ ಪ್ರತಿಭಟನಾಕಾರರು ಮರೆತುಬಿಟ್ಟಿದ್ದಾರೆ.

ಸಣ್ಣಪುಟ್ಟ ಪ್ರತಿಭಟನೆಗಳಿಗೆ ಮಾತ್ರ ಈ ಸ್ಥಳಗಳು ಸೀಮಿತ (Vidhanasoudha Gandhi)

ಎಂಜಿ ರಸ್ತೆ ಹಾಗೂ ಮೌರ್ಯ ಸರ್ಕಲ್‌ಗಳ ಬಳಿ ಇರುವ ಗಾಂಧಿ ಪ್ರತಿಮೆಗಳ ಬಳಿ ಸಣ್ಣ ಪುಟ್ಟ ಪ್ರತಿಭಟನೆಗಳು ನಡೆಯುತ್ತವೆ. ಸಂಘಟನೆಗಳು, ಸಾರ್ವಜನಿಕರು ಇಲ್ಲಿ ಪ್ರತಿಭಟನೆಗಳನ್ನು ಮಾಡುತ್ತಾರೆ. ಆದ್ರೆ ರಾಜಕಾರಣಿಗಳು ಮಾತ್ರ ವಿಧಾನಸೌಧದ ಬಳಿ ಮೌನವಾಗಿ ಕುಳಿತಿರುವ ಗಾಂಧಿಗೆ ಫಿಕ್ಸ್‌ ಆಗಿದ್ದಾರೆ. ವಿಧಾನಸೌಧದ ಗಾಂಧಿ ಜೊತೆಗೆ ಮಾತ್ರ ಇವರ ಒಡನಾಟ. ಸಾರ್ವಜನಿಕರಿಗೆ ವಿಧಾನಸೌಧದ ಆವರಣದಲ್ಲಿ ಪ್ರತಿಭಟನೆ ಮಾಡೋದಕ್ಕೆ ಅವಕಾಶವಿಲ್ಲ. ಇಲ್ಲದಿದ್ದರೆ ಅವರೂ ಅಲ್ಲೇ ಪ್ರತಿಭಟನೆ ಮಾಡುತ್ತಿದ್ದರೋ ಏನೋ..

ವಿಧಾನಸೌಧದ ಗಾಂಧಿ ಪ್ರತಿಮೆಯ ವಿಶೇಷತೆ ಏನು..?

2014-15ರಲ್ಲಿ ಇಲ್ಲಿ ಗಾಂಧಿ ಪ್ರತಿಮೆ ಸ್ಥಾಪನೆ ಮಾಡಲಾಗಿದೆ.  13 ಅಡಿ ಎತ್ತರದ ಮೇಲೆ 27 ಅಡಿ ಎತ್ತರದ ಕಂಚಿನ ಪ್ರತಿಮೆ ಇದಾಗಿದೆ. ಗಾಂಧಿ ಇಲ್ಲಿ ಧ್ಯಾನಾಸಕ್ತರಾಗಿ ಕುಳಿತಿದ್ದಾರೆ. ಈ ಗಾಂಧಿ ಕಂಚಿನ ಪ್ರತಿಮೆಗೆ  7.25 ಕೋಟಿ ರೂಪಾಯಿ ಹಾಗೂ ಸಿವಿಲ್ ಕಾಮಗಾರಿಗೆ 3.75 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ದೆಹಲಿ ಮೂಲದ ರಾಮ್ ಸುತಾರ್ ಆರ್ಟ್ಸ್ ಕಂಪೆನಿ ಈ ಪ್ರತಿಮೆಯನ್ನು ತಯಾರಿಸಿಕೊಟ್ಟಿದೆ.

ವಿಧಾನಸೌಧ ಮತ್ತು ವಿಕಾಸಸೌಧ ಕಟ್ಟಡಗಳು 66 ಅಡಿ ಎತ್ತರವಿವೆ. ಆ ಎರಡೂ ಕಟ್ಟಡಗಳ ಭವ್ಯತೆಗೆ ಮೆರುಗು ನೀಡುವ ಹಾಗೆ ಮಧ್ಯ ಭಾಗದಲ್ಲಿ ಪ್ರತಿಮೆ ಸ್ಥಾಪಿಸಲಾಗಿದೆ. ವಿಧಾನಸೌಧ, ವಿಕಾಸಸೌಧ, ಶಾಸಕರ ಭವನ ಈ ಹಿಂದೆ ಕಬ್ಬನ್ ಉದ್ಯಾನದ ವ್ಯಾಪ್ತಿಗೆ ಬರುತ್ತಿದ್ದ ಕಾರಣ ಹೊಸದಾಗಿ ಪ್ರತಿಮೆಗಳ ಸ್ಥಾಪನೆಗೆ ಅವಕಾಶ ಇರಲಿಲ್ಲ. ಆದರೆ, ಕಾಯ್ದೆಗೆ ತಿದ್ದುಪಡಿ ತಂದು ಈ ಪ್ರದೇಶಗಳನ್ನು ಕಬ್ಬನ್ ಉದ್ಯಾನದ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

 

 

Share Post