ಬೆಂಗಳೂರಿನತ್ತ ಚಾಲಕ ರಹಿತ ಮೆಟ್ರೋ ರೈಲು; ಶೀಘ್ರವೇ ಹಳದಿ ಮಾರ್ಗದಲ್ಲಿ ಸಂಚಾರ
ಬೆಂಗಳೂರು; ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಂಸ್ಥೆ ಲಾಭದಲ್ಲಿ ಮುನ್ನಡೆಯುತ್ತಿದೆ. ಹೀಗಾಗಿ, ಮೆಟ್ರೋ ಮಾರ್ಗಗಳ ವಿಸ್ತರಣೆ, ವಿನೂತನ ತಂತ್ರಜ್ಞಾನಗಳ ಅಳವಡಿಕೆ ನಡೆಯುತ್ತಿದೆ. ಅದರ ಭಾಗವಾಗಿ ಚಾಲಕ ರಹಿತ ಮೆಟ್ರೋ ರೈಲೊಂದು ಶೀಘ್ರದಲ್ಲೇ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ಮಾಡಲಿದೆ. ಕೆಲವೇ ತಿಂಗಳುಗಳಲ್ಲಿ ಇನ್ನೂ ಒಂದಷ್ಟು ಚಾಲಕ ರಹಿತ ರೈಲುಗಳು ಬೆಂಗಳೂರಿನಲ್ಲಿ ಸಂಚಾರ ಮಾಡಲಿವೆ.
ಆರು ಬೋಗಿಗಳ ಚಾಲಕ ರಹಿತ ಮೆಟ್ರೋ ರೈಲನ್ನು ಚೀನಾದಿಂದ ತರಿಸಲಾಗುತ್ತಿದೆ. ಜನವರಿ 20ರಂದು ಚೀನಾದಿಂದ ಹಡಗಿಗೆ ಲೋಡ್ ಮಾಡಲಾಗಿದೆ. ಫೆಬ್ರವರಿ 7ಕ್ಕೆ ಅದು ಚೆನ್ನೈ ಬಂದರಿಗೆ ಬರಲಿದೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಆರೂ ಬೋಗಿಗಳನ್ನು ಬೆಂಗಳೂರಿಗೆ ತರಲಾಗುತ್ತದೆ. ಅನಂತರ ಬೆಂಗಳೂರಿನಲ್ಲಿ ಆರೂ ಬೋಗಿಗಳನ್ನು ಜೋಡಿಸಲಾಗುತ್ತದೆ. ಶೀಗ್ರದಲ್ಲೇ ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ರೈಲು ಸಂಚಾರ ಮಾಡಲಿದೆ.
ರಸ್ತೆ ಮೂಲಕ ಚೆನ್ನೈನಿಂದ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಚಾಲಕ ರಹಿತ ಮೆಟ್ರೋ ರೈಲನ್ನು ತರಲಾಗುತ್ತದೆ. ಈ ಚಾಲಕ ರಹಿತ ಮೆಟ್ರೋ ರೈಲಿಗೆ ಅತ್ಯಾಧುನಿಕ ತಂತ್ರಜ್ಞಾನ ಜೋಡಣೆ ಮಾಡಲಾಗುತ್ತದೆ. ಅನಂತರ ಎಲೆಕ್ಟ್ರಾನಿಕ್ ಸಿಟಿ-ಆರ್ವಿ ರಸ್ತೆಗೆ ಸಂಪರ್ಕಿಸುವ 19-ಕಿಮೀ ಹಳದಿ ಮಾರ್ಗದಲ್ಲಿ ಇದರ ಸಂಚಾರ ನಡೆಯಲಿದೆ. ಸೆಪ್ಟೆಂಬರ್ನಲ್ಲಿ ಈ ರೈಲಿನ ಓಡಾಟ ಸಾಧ್ಯವಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಯೋಜನೆ ಯಶಸ್ವಿಯಾದರೆ, ಮುಂದೆ ಬರುವ ಎಲ್ಲಾ ರೈಲುಗಳೂ ಚಾಲಕ ರಹಿತವಾಗಿರುತ್ತವೆ ಎಂದು ತಿಳಿದುಬಂದಿದೆ.