BengaluruCrime

ಪ್ರಯಾಣಿಕರ ವಸ್ತುಗಳನ್ನು ಕದಿಯುತ್ತಿದ್ದ ಅಸಿಸ್ಟೆಂಟ್‌ ಲೋಕೋಪೈಲಟ್‌ ಅರೆಸ್ಟ್‌; ಸಾಲ ತೀರಿಸೋಕೆ ಹೀಗೆಲ್ಲಾ ಮಾಡ್ಬೇಕಾ..?

ಬೆಂಗಳೂರು; ಆತ ರೈಲ್ವೆ ಇಲಾಖೆ ಅಸಿಸ್ಟೆಂಟ್‌ ಲೋಕೋ ಪೈಲಟ್‌.. ತಕ್ಕಮಟ್ಟಿಗೆ ಸಂಬಳ ಕೂಡಾ ಬರುತ್ತೆ. ಆದರೂ ಅದ್ಯಾವ ಕಾರಣಕ್ಕೋ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ. ಆ ಸಾಲ ತೀರಿಸೋದಕ್ಕೆ ಆತ ರೈಲು ಪ್ರಯಾಣಿಕರ ವಸ್ತುಗಳನ್ನು ಕದಿಯೋದೇ ಚಾಳಿ ಮಾಡಿಕೊಂಡಿದ್ದ. ಇದೀಗ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ.

ಅಸಿಸ್ಟೆಂಟ್ ಲೋಕೋ ಪೈಲಟ್ ಪಡಿ ಸ್ವರಾಜ್ ಎಂಬಾತನೇ ಬಂಧಿತ ಆರೋಪಿ. ಈತ ವರ್ಷದ ಹಿಂದೆ ಬಡ ಕುಟುಂಬದ ಹುಡುಗಿಯೊಬ್ಬಳನ್ನು ವಿವಾಹವಾಗಿದ್ದ. ವಿವಾಹಕ್ಕಾಗಿ ಈತ ಸುಮಾರು 13 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಬರುವ ಸಂಬಳದಲ್ಲಿ ಮನೆ ನಿರ್ವಹಣೆ ಜೊತೆಗೆ ಸಾಲ ತೀರಿಸೋದಕ್ಕೆ ಆಗನಿಗೆ ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಲ್ಯಾಪ್‌ಟಾಪ್‌, ಮೊಬೈಲ್‌ ಮುಂತಾದ ಬೆಲೆಬಾಳುವ ವಸ್ತುಗಳನ್ನು ಕದ್ದು, ಅವುಗಳನ್ನು ಹೊರಗೆ ಮಾರುತ್ತಿದ್ದ ಎನ್ನಲಾಗಿದೆ.

ಇತ್ತೀಚೆಗೆ ಬೆಂಗಳೂರಿನಿಂದ ಉಡುಪಿಗೆ ಪ್ರಯಾಣಿಸುತ್ತಿದ್ದ ಓರ್ವ ಪ್ರಯಾಣಿಕರು ಮಲಗಿದ್ದಾಗ ಅವರ ಲ್ಯಾಪ್ ಟಾಪ್ ಬ್ಯಾಗ್‌ ಸಮೇತ ಕಳುವಾಗಿತ್ತು. ಈ ಬಗ್ಗೆ ದೂರು ಕೊಡಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅನುಮಾನ ಬಂದು ಪೊಲೀಸರು, ಪಡಿ ಸ್ವರಾಜ್ ಟ್ರಾಲಿ ಬ್ಯಾಗ್ ಪರಿಶೀಲಿಸಿದಾಗ ಕದ್ದ ವಸ್ತುಗಳು ಸಿಕ್ಕಿವೆ. ಆರೋಪಿಯಿಂದ ಲ್ಯಾಪ್‌ಟಾಪ್‌, ಮೊಬೈಲ್‌ಗಳು, ಆಭರಣಗಳು ಸಿಕ್ಕಿವೆ. ಇವುಗಳು ಬೆಲೆ 3 ಲಕ್ಷದ 33 ಸಾವಿರ 489 ರೂಪಾಯಿ ಎಂದು ಅಂದಾಜಿಸಲಾಗಿದೆ.

 

Share Post