BengaluruPolitics

ಬಾಬಾಬುಡನ್ ಗಿರಿ ಕೇಸ್ ರಿಓಪನ್ ಸುದ್ದಿ; ಮಾಧ್ಯಮಗಳ ಕಿವಿ ಹಿಂಡಿದ ಸಿಎಂ

ಬೆಂಗಳೂರು; 2017ರ ಬಾಬಾಬುಡನ್ ಗಿರಿ ಪ್ರಕರಣವನ್ನು ರಿಓಪನ್ ಮಾಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಇದು ಸುಳ್ಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅದಕ್ಕೆ ಬೇಕಾದ ದಾಖಲೆಯನ್ನೂ ಒದಗಿಸಿದ್ದಾರೆ. ಈ ಬಗ್ಗೆ ಅವರ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ಮಾಧ್ಯಮಗಳ ಕಿವಿ ಹಿಂಡಿದ್ದಾರೆ

ಸಿದ್ದರಾಮಯ್ಯರ ಫೇಸ್ ಬುಕ್ ಪೋಸ್ಟ್ ಯತಾವತ್ ಮಾಹಿತಿ ಇಲ್ಲಿದೆ;

ಕೆಲವು ದೃಶ್ಯ ಮಾಧ್ಯಮಗಳಲ್ಲಿ ಬಾಬಾಬುಡನ್ ಗಿರಿಯಲ್ಲಿ ಗೋರಿ ದ್ವಂಸ ಪ್ರಕರಣವನ್ನು ರೀ ಓಪನ್ ಮಾಡಲಾಗಿದೆ ಎನ್ನುವ ಸುದ್ದಿ ಪ್ರಸಾರವಾಗುತ್ತಿದ್ದು, ಇದು ತಪ್ಪು ಮಾಹಿತಿ ಹಾಗೂ ಸಂಪೂರ್ಣ ಸುಳ್ಳು ಸುದ್ದಿಯಾಗಿದೆ.

2017 ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ 2020 ರ ಮಾರ್ಚ್ 19 ರಂದು ವಿಚಾರಣೆಗೆ ಅನುಮತಿಗಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅದರ ಆಧಾರದಲ್ಲಿ 2023 ರ ಸೆಪ್ಟೆಂಬರ್ 7ರಂದು ಸರ್ಕಾರ ಅನುಮತಿ ನೀಡಿತ್ತು.
2023ರ ಅಕ್ಟೋಬರ್ 24 ರಂದು ಆರೋಪಿಗಳ ವಿರುದ್ಧ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಬಳಿಕ ಕಾನೂನು ಪ್ರಕ್ರಿಯೆಯ ಮುಂದುವರೆದ ಭಾಗವಾಗಿ ಜನವರಿ 8ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯದಿಂದಲೇ ಸಮನ್ಸ್ ಜಾರಿಯಾಗಿದೆ.

ಇದು ಸಹಜ ಕಾನೂನು ಪ್ರಕ್ರಿಯೆ, ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ. ರಾಜ್ಯ ಸರ್ಕಾರ ಪ್ರಕರಣದ ಮರು ತನಿಖೆಗೆ ಮುಂದಾಗಿದೆ ಎಂದು ಮಾಧ್ಯಮಗಳು ಸುಳ್ಳು ಸುದ್ದಿ ಬಿತ್ತರಿಸಿ, ಪ್ರಚೋದನೆ ನೀಡುವ ಕೆಲಸ ಮಾಡಬಾರದು.
ಇಂತಹ ಸುಳ್ಳು ಸುದ್ದಿ ಪ್ರಸಾರದಿಂದ ಮಾಧ್ಯಮಗಳು ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತವೆ ಜೊತೆಗೆ ಕಾನೂನು ಸುವ್ಯವಸ್ಥೆ ಕೂಡ ಹದಗೆಡುವ ಸಾಧ್ಯತೆ ಅಲ್ಲಗಳೆಯಲಾಗದು. ಹೀಗಾಗಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು.

Share Post