ಮಾಜಿ ಸಚಿವ ಶ್ರೀರಾಮುಲು ಸಹೋದರಿ ಜೆ.ಶಾಂತಾ ವೈಎಸ್ಆರ್ ಕಾಂಗ್ರೆಸ್ ಸೇರ್ಪಡೆ!
ಬಳ್ಳಾರಿ; ಬಳ್ಳಾರಿಯ ಮಾಜಿ ಸಂಸದೆ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಅವರ ಸಹೋದರಿ ಜೆ.ಶಾಂತಾ ಬಿಜೆಪಿ ತೊರೆದಿದ್ದಾರೆ. ಅವರು ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿರುವ ವೈಎಸ್ಆರ್ ಕಾಂಗ್ರೆಸ್ ಪಾರ್ಟಿಯನ್ನು ಸೇರ್ಪಡೆಯಾಗಿದ್ದಾರೆ. ಆಂಧ್ರಪ್ರದೇಶದ ಸಿಎಂ ಜಗನ್ಮೋಹನ್ ರೆಡ್ಡಿ ಅವರು ಸಮ್ಮುಖದಲ್ಲಿ ಜೆ.ಶಾಂತಾ ಅವರು ವೈಎಸ್ಆರ್ ಕಾಂಗ್ರೆಸ್ ಪಾರ್ಟಿ ಸೇರಿದ್ದಾರೆ. ವಿಜಯವಾಡ ತಾಡಿಪಲ್ಲಿ ಸಿಎಂ ಕ್ಯಾಂಪ್ ಆಫೀಸ್ನಲ್ಲಿ ಈ ಸಮಾರಂಭ ನಡೆಯಿತು.
ಜೆ.ಶಾಂತಾ ಅವರು ಅನಂತಪುರ ಜಿಲ್ಲೆಯ ಗುಂತಕಲ್ ಪಟ್ಟಣದ ನಿವಾಸಿಯಾಗಿದ್ದಾರೆ. ಇವರು ಮುಂದಿನ ಚುನಾವಣೆಯಲ್ಲಿ ಹಿಂದೂಪುರ ಕ್ಷೇತ್ರದಿಂದ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು ಬಿಜೆಪಿ ತೊರೆದು ವೈಎಸ್ಆರ್ಸಿಪಿಗೆ ಸೇರಿದ್ದಾರೆ.
2009ರಲ್ಲಿ ಬಿಜೆಪಿ ಟಿಕೆಟ್ ಪಡೆದು ಅವರು ಲೋಕಸಭಾ ಸದಸ್ಯರಾಗಿದ್ದರು. ಶ್ರೀರಾಮುಲು ಹಾಗೂ ಜನಾರ್ದನರೆಡ್ಡಿ ಪ್ರಾಬಲ್ಯದಿಂದಾಗಿ ಜೆ.ಶಾಂತಾ ಅವರು ಗೆಲುವು ಸಾಧಿಸಿದ್ದರು. ಅನಂತರ 2018ರಲ್ಲಿ ನಡೆದ ಉಪಚುನಾವಣೆಯಲ್ಲಿ ಉಗ್ರಪ್ಪ ವಿರುದ್ಧ ಸೋಲನುಭವಿಸಿದ್ದರು. ಇದಾದ ಮೇಲೆ ರಾಜಕೀಯದಿಂದ ದೂರ ಇದ್ದ ಶಾಂತಾ ಅವರು ಆಂಧ್ರದ ಮೂಲಕ ರಾಜಕೀಯ ಮರುಪ್ರವೇಶಕ್ಕೆ ಸಿದ್ಧತೆ ನಡೆಸಿದ್ದಾರೆ.