ಬಾಬರಿ ಮಸೀದಿ ಧ್ವಂಸ ವಿಚಾರ ಬಿಜೆಪಿಗೆ ಗೊತ್ತೇ ಇರಲಿಲ್ಲವಾ..?
ನವದೆಹಲಿ: ೧೯೯೨ರಲ್ಲಿ ಆಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ವಿಚಾರ ಬಿಜೆಪಿಗೆ ಗೊತ್ತೇ ಇರಲಿಲ್ಲವಂತೆ. ಹೀಗಂತ ಹೇಳಿದವರು ಬೇರೆ ಯಾರೂ ಅಲ್ಲ. ಕೇಂದ್ರ ಮಾಜಿ ಸಚಿವ ಹಾಗೂ ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ರಾಮ್ ನಾಯಕ್.
ಖಾಸಗಿ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ರಾಮ್ ನಾಯಕ್ ಅವರು, ಮಸೀದಿಯನ್ನು ಧ್ವಂಸಗೊಳಿಸಿದ ಬಳಿಕವಷ್ಟೇ ಆ ಮಾಹಿತಿ ಬಿಜೆಪಿ ತಿಳಿದಿತ್ತು. 1992ರ ಡಿಸೆಂಬರ್ 6. ಆ ಸಂದರ್ಭ ನಾನು ಬಿಜೆಪಿ ಪಕ್ಷದ ಮುಖ್ಯ ಸಚೇತಕನಾಗಿದ್ದೆ. ಸುಂದರ್ ಸಿಂಗ್ ಭಂಡಾರಿ ಸೇರಿದಂತೆ ಇತರ ನಾಯಕರ ಜತೆ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕುಳಿತು ಅಯೋಧ್ಯೆಯಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ. ಆ ಸಂದರ್ಭದಲ್ಲಿ ಸಂವಹನ ಸುಲಭವಾಗಿರಲಿಲ್ಲ, ಮೊಬೈಲ್ಗಳು ಇರಲಿಲ್ಲ. ಸ್ಥಿರ ದೂರವಾಣಿ ಮೂಲಕ ಮಾಹಿತಿ ಪಡೆಯುತ್ತಿದ್ದೆವು. ಅಡ್ವಾಣಿ ಅವರು ಅಯೋಧ್ಯೆಯಲ್ಲಿದ್ದರೆ, ವಾಜಪೇಯಿ ದೆಹಲಿಯಲ್ಲೇ ಇದ್ದರು. ಎಷ್ಟು ಮಂದಿ ಕರಸೇವಕರನ್ನು ಅಯೋಧ್ಯೆ ಪ್ರವೇಶಿಸಲು ಬಿಟ್ಟರು, ಎಷ್ಟು ಮಂದಿ ಹೊರಗೆ ಇದ್ದಾರೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದೆವು. ಅಡ್ವಾಣಿ ಅವರು ಹಾಗೂ ಪಕ್ಷದ ಇತರ ನಾಯಕರು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂಬ ಮಾಹಿತಿ ನಮಗೆ ದೊರೆತಿತ್ತು. ಆ ಬಳಿಕ ಏನಾಗಬಹುದು ಎಂಬ ಸುಳಿವು ಕೂಡ ನಮಗಿರಲಿಲ್ಲ. ಬಾಬರಿ ಮಸೀದಿ ಧ್ವಂಸಗೊಳಿಸಿದ ಬಳಿಕವಷ್ಟೇ ನಮಗೆ ಆ ಮಾಹಿತಿ ದೊರೆಯಿತು ಎಂದು ರಾಮ್ ನಾಯಕ್ ಹೇಳಿದ್ದಾರೆ.