NationalPolitics

ಅಭ್ಯರ್ಥಿಗಳೆಲ್ಲಾ ಹೈದರಾಬಾದ್‌ಗೆ ಬನ್ನಿ; ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ

ಹೈದರಾಬಾದ್‌; ನಾಳೆ ತೆಲಂಗಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳೂ ನಡೆದಿವೆ. ಇನ್ನು ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರಗಳೂ ಜೋರಾಗಿವೆ. ಕಾಂಗ್ರೆಸ್‌ ಗೆಲ್ಲಬಹುದು ಎಂದು ಬಹುತೇಕ ಸಮೀಕ್ಷೆಗಳು ಹೇಳುತ್ತಿವೆ. ಆದರೂ, ಅತಂತ್ರ ಸ್ಥಿತಿ ಏರ್ಪಡುವ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಅತಂತ್ರ ಸ್ಥಿತಿ ಏರ್ಪಟ್ಟರೆ ಶಾಸಕರ ಖರೀದಿ ಜೋರಾಗಿ ನಡೆಯುತ್ತದೆ. ಹೀಗಾಗಿಯೇ ಕಾಂಗ್ರೆಸ್‌ ಪಕ್ಷ ಫಲಿತಾಂಶಕ್ಕೆ ಮೊದಲೇ ಎಚ್ಚೆತ್ತುಕೊಂಡಿದೆ. ತಮ್ಮ ಎಲ್ಲಾ ಅಭ್ಯರ್ಥಿಗಳನ್ನು ಹೈದರಾಬಾದ್‌ಗೆ ಕರೆಸಿಕೊಳ್ಳುತ್ತಿದೆ.

119 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧೆ ಮಾಡಿದ್ದು, ಎಲ್ಲಾ ಅಭ್ಯರ್ಥಿಗಳೂ ಹೈದರಾಬಾದ್‌ಗೆ ಬರಬೇಕೆಂದು ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ ಕೊಟ್ಟಿದೆ. ಇನ್ನೊಂದೆಡೆ ಇಂದು ಸಂಜೆ ಕರ್ನಾಟಕ ಸರ್ಕಾರದ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೈದರಾಬಾದ್‌ಗೆ ತೆರಳುತ್ತಿದ್ದಾರೆ. ನಾಳೆ ಫಲಿತಾಂಶ ಅತಂತ್ರವಾದರೆ, ಗೆದ್ದ ಶಾಸಕರನ್ನು ಬೆಂಗಳೂರಿಗೆ ಕರೆತಂದು, ಆಪರೇಷನ್‌ ಬಲೆಗೆ ಸಿಲುಕದಂತೆ ಕಾಪಾಡುವ ಹೊಣೆಯನ್ನು ಡಿ.ಕೆ.ಶಿವಕುಮಾರ್‌ ವಹಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ಹಲವು ಅಭ್ಯರ್ಥಿಗಳು ಹೈದರಾಬಾದ್‌ಗೆ ಬಂದಿದ್ದಾರೆ. ಎಲ್ಲಾ ಅಭ್ಯರ್ಥಿಗಳಿಗಾಗಿ ರೆಸಾರ್ಟ್‌ ಒಂದನ್ನು ಬುಕ್‌ ಮಾಡಲಾಗಿದೆ. ಇತ್ತ ಬೆಂಗಳೂರಿಗೆ ಕರೆತರುವುದಾದರೆ, ಬೆಂಗಳೂರಿನಲ್ಲೂ ಒಂದು ರೆಸಾರ್ಟ್‌ ಈಗ ಒಂದು ರಿಸರ್ವ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ.

Share Post