ಚಾಮುಂಡೇಶ್ವರಿಗೂ ಗೃಹಲಕ್ಷ್ಮಿ ಹಣ; 1,18,000 ರೂ. ಪಾವತಿ
ಮೈಸೂರು; ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆ ಸೇರಿ ಐದು ಗ್ಯಾರೆಂಟಿಗಳನ್ನು ಜಾರಿ ಮಾಡೋದಾಗಿ ಚುನಾವಣೆಗೆ ಮೊದಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಚಾಮುಂಡೇಶ್ವರಿ ಮುಂದೆ ಶಪಥ ಮಾಡಿ ಬಂದಿದ್ದರು. ಇದೀಗ, ನಾಲ್ಕು ಯೋಜನೆಗಳನ್ನು ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀ ಹಣವನ್ನೂ ಚಾಮುಂಡೇಶ್ವರಿಗೂ ಅರ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ನಾಡದೇವತೆ ಚಾಮುಂಡೇಶ್ವರಿಗೂ ಗೃಹಲಕ್ಷ್ಮೀ ಹಣ ತಲುಪಬೇಕು ಅಂತ ಪರಿಷತ್ ಸದಸ್ಯರೊಬ್ಬರು ಸರ್ಕಾರಕ್ಕೆ ಪತ್ರ ಬರೆದಿದ್ದರು. ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಎಂಬವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಡಿ.ಕೆ.ಶಿವಕುಮಾರ್ ಸೂಚನೆ ಕೊಟ್ಟಿದ್ದರು.
ಅದರಂತೆ, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರತಿ ತಿಂಗಳು 2 ಸಾವಿರ ರೂ.ನಂತೆ 59 ತಿಂಗಳ ಹಣವನ್ನು ತಾಯಿ ಚಾಮುಂಡೇಶ್ವರಿ ದೇಗುಲಕ್ಕೆ ಅರ್ಪಣೆ ಮಾಡಲಿದ್ದಾರೆ. 1,18,000 ರೂಪಾಯಿ ಹಣವನ್ನ ದೇಗುಲಕ್ಕೆ ನೀಡಲು ಸಚಿವರು ಮುಂದಾಗಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ವೈಯಕ್ತಿಕ ಹಣದಿಂದಲೂ ಕೂಡಾ ಚಾಮುಂಡಿಗೆ ಹಣ ಸಂದಾಯ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.