ತೆಲಂಗಾಣ ಚುನಾವಣೆ; ಅತಂತ್ರ ಸ್ಥಿತಿ ಏರ್ಪಟ್ಟರೆ ಯಾರಿಗೆ ಅಧಿಕಾರ..?
ಹೈದರಾಬಾದ್; 119 ಕ್ಷೇತ್ರಗಳ ತೆಲಂಗಾಣ ವಿಧಾನಸಭೆಗೆ ನವೆಂಬರ್ 30ರಂದು ಮತದಾನ ನಡೆಯಲಿದೆ. ಈಗಾಗಲೇ ಎಲ್ಲಾ ಪಕ್ಷಗಳು ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಆಡಳಿತಾರೂಢ ಬಿಆರ್‌ಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಅಧಿಕಾರ ತನ್ನದಾಗಿಸಿಕೊಳ್ಳುವುದಕ್ಕೆ ಸೆಣಸಾಡುತ್ತಿವೆ. ತೆಲಂಗಾಣ ರಾಜ್ಯ ಸ್ಥಾಪನೆಯಾದ ಮೇಲೆ ಕಳೆದ ಹತ್ತು ವರ್ಷಗಳಿಂದ ಬಿಆರ್‌ಎಸ್ ಪಾರ್ಟಿಯೇ ಅಧಿಕಾರದಲ್ಲಿದೆ. ಸತತ ಮೂರನೇ ಬಾರಿ ಅಧಿಕಾರಕ್ಕೇರಲು ಸಿಎಂ ಕೆಸಿಆರ್ ನಾನಾ ಕಸರತ್ತು ಮಾಡುತ್ತಿದ್ದಾರೆ. ಈ ನಡುವೆ ತೆಲಂಗಾಣದಲ್ಲಿ ಸಾಕಷ್ಟು ಬಲಗೊಂಡಿರುವ ಕಾಂಗ್ರೆಸ್ ಪಾರ್ಟಿ ರೇವಂತ್ ರೆಡ್ಡಿ ನೇತೃತ್ವದಲ್ಲಿ ಭಾರಿ ಫೈಟ್ ಕೊಡುತ್ತಿದೆ. ಬಿಜೆಪಿ ಕೂಡಾ ಈ ಅಧಿಕಾರಕ್ಕಾಗಿ ಸಾಕಷ್ಟು ರಾಜಕೀಯ ತಂತ್ರಗಾರಿಕೆ ನಡೆಸುತ್ತಿದೆ. ಇದರ ನಡುವೆ ಎಂಐಎಂ ಪಾರ್ಟಿ ಒಂಬತ್ತು ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಈಗಾಗಲೇ ಅಂತಿಮ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿ ಪ್ರಚಾರ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಹಲವು ಪ್ರಮುಖರು ತೆಲಂಗಾಣದಲ್ಲಿ ತಮ್ಮ ಪಾರ್ಟಿಗಳ ಪರವಾಗಿ ಪ್ರಚಾರ ಶುರು ಮಾಡಿದ್ದಾರೆ. ಕರ್ನಾಟಕದಂತೆ ತೆಲಂಗಾಣದಲ್ಲೂ ಕಾಂಗ್ರೆಸ್ ಆರು ಉಚಿತ ಗ್ಯಾರೆಂಟಿಗಳ ಭರವಸೆ ನೀಡಿದೆ. ಈ ಬಾರಿ ಕಾಂಗ್ರೆಸ್ ಪಕ್ಷ ಸಾಕಷ್ಟು ಬಲಗೊಂಡಿರುವುದರಿಂದ ಬಿಆರ್‌ಎಸ್‌ಗೆ ನೆಕ್ ಟು ನೆಕ್ ಫೈಟ್ ಕೊಡುತ್ತಿದೆ. ಚುನಾವಣಾ ಪೂರ್ವ ಸಮೀಕ್ಷೆಗಳೆಲ್ಲವೂ ಈ ಬಾರಿಯ ಫಲಿತಾಂಶ ಅತಂತ್ರವಾಗಬಹುದು ಎಂದೇ ಹೇಳುತ್ತಿವೆ. ಬಿಆರ್‌ಎಸ್ ಅಥವಾ ಕಾಂಗ್ರೆಸ್ ಪಕ್ಷಗಳು ಕೊನೆಯ ಹಂತದಲ್ಲಿ ನಡೆಸುವ ತಂತ್ರಗಾರಿಕೆಯಲ್ಲಿ ಯಾವ ಪಕ್ಷ ಒಂದಷ್ಟು ಹೆಚ್ಚು ಸೀಟುಗಳನ್ನು ಗಳಿಸಿಕೊಂಡರೆ ಸರಳ ಬಹುಮತ ಪಡೆಯಬಹುದು. ಸದ್ಯ ಪರಿಸ್ಥಿತಿ ಪ್ರಕಾರ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗೋದು ಕಷ್ಟ ಕಷ್ಟ. ಹೀಗಾಗಿ ಚುನಾವಣಾಪೂರ್ವ ಸಮೀಕ್ಷೆಗಳಂತೆ ಅತಂತ್ರ ಸ್ಥಿತಿ ನಿರ್ಮಣವಾದವರೆ ಯಾವ ಪಕ್ಷಗಳು ಒಗ್ಗೂಡಿ ಅಧಿಕಾರ ನಡೆಸುತ್ತವೆ ಅನ್ನೋದು ಕುತೂಹಲದ ಸಂತ.
ಅಂದಹಾಗೆ, ಅವಿಭಜಿತ ಆಂಧ್ರಪ್ರದೇಶವಿದ್ದ ಸಂದರ್ಭದಲ್ಲೂ ಹಾಗೂ ತೆಲಂಗಾಣ ಮತ್ತು ಆಂಧ್ರಪ್ರದೇಶ ಎಂದು ಎರಡು ಭಾಗವಾದ ಮೇಲೂ ಬಹುತೇಕ ಇಲ್ಲಿ ಅಧಿಕಾರ ನಡೆಸಿದ ಪಕ್ಷಗಳು ಸ್ಪಷ್ಟ ಬಹುಮತ ಪಡೆದಿವೆ. ಅದರಲ್ಲೂ ಕಳೆದ ನಾಲ್ಕು ದಶಕದಲ್ಲಿ ಅಧಿಕಾರ ನಡೆಸಿದ ಎಲ್ಲಾ ಪಕ್ಷಗಳೂ ಭಾರೀ ಬಹುಮತದೊಂದಿಗೇ ಗೆದ್ದಿವೆ. ಕಳೆದ ಚುನಾವಣೆಯಲ್ಲೂ ತೆಲಂಗಾಣದಲ್ಲಿ ಭಾರತ ರಾಷ್ಟ್ರ ಸಮಿತಿ 88 ಸ್ಥಾನಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್ 19 ಸ್ಥಾನಗಳಲ್ಲಿ ಗೆದ್ದರೆ, ಬಿಜೆಪಿ ಕೇವಲ 3 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು.
ಆದ್ರೆ ಈ ಬಾರಿ ರೇವಂತ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಂಘಟನೆ ಚೆನ್ನಾಗಿ ಆಗಿದೆ. ಜೊತೆಗೆ ಉಚಿತ ಯೋಜನೆಗಳ ಭರವಸೆ ನೀಡಲಾಗಿದೆ. ಇನ್ನೊಂದೆಡೆ ಬಿಜೆಪಿ ಕೂಡಾ ಸಾಕಷ್ಟು ಬಲಗೊಂಡಿದೆ. ಹೀಗಾಗಿ ಬಿಆರ್‌ಎಸ್ ಪಾರ್ಟಿಗೆ ಈ ಬಾರಿ ಕೊಂಚ ಹೊಡೆತ ಆಗೋದು ಗ್ಯಾರೆಂಟಿ. ಆಡಳಿತ ವಿರೋಧಿ ಅಲೆ ಇದ್ದರೂ ಕೂಡಾ, ಬಿಆರ್‌ಎಸ್ ಪಾರ್ಟಿ ಗೆಲ್ಲುವ ಪಕ್ಷವಾಗಿದೆ. ಆದ್ರೆ ಕಾಂಗ್ರೆಸ್ ಪಕ್ಷ ಸಾಕಷ್ಟು ಬಲಗೊಂಡಿರುವುದರಿಂದ ಎರಡೂ ಪಕ್ಷಗಳು ನೆಕ್ ಟು ನೆಕ್ ಫೈಟ್ ಕೊಡಲಿವೆ ಎಂದು ಹೇಳಲಾಗುತ್ತಿದೆ.
ಸಮೀಕ್ಷೆಗಳಂತೆಯೇ ಫಲಿತಾಂಶ ಬಂದರೆ ಇದೇ ಮೊದಲ ಬಾರಿಗೆ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ. ಈ ವೇಳೆ ಎರಡು ಪಕ್ಷಗಳು ಒಂದಾಗಿ ಸರ್ಕಾರ ರಚಿಸಬೇಕಾಗುತ್ತದೆ. ಒಂದು ಕಡೆ ಬಿಆರ್‌ಎಸ್ ಪಕ್ಷದ ನಾಯಕರು ಬಿಜೆಪಿ ಅಂದ್ರೆ ಉರಿದು ಬೀಳುತ್ತಾರೆ. ಮೋದಿ ವಿರುದ್ಧ ಸಮರವೇ ಸಾರಿದ್ದಾರೆ. ಇತ್ತ ಕಾಂಗ್ರೆಸ್ ಪಾರ್ಟಿಗೆ ಬಿಆರ್‌ಎಸ್ ನಾಯಕರ ವಿರುದ್ದ ಆಕ್ರೋಶವಿದೆ. ಬಿಆರ್‌ಎಸ್ ಜನವಿರೋಧಿ ನೀತಿ ವಿರುದ್ಧವೇ ಕಾಂಗ್ರೆಸ್ ಜನ ಸಂಘಟನೆ ಮಾಡಿರೋದು. ಹೀಗಾಗಿ, ಬಿಆರ್‌ಎಸ್ ಹಾಗೂ ಕಾಂಗ್ರೆಸ್ ಕೂಡಾ ಹೊಂದಾಣಿಕೆ ಮಾಡಿಕೊಳ್ಳೋದು ಕಷ್ಟ. ಕಾಂಗ್ರೆಸ್-ಬಿಜೆಪಿ ಕೂಡಾ ಯಾವ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳೋದಕ್ಕೆ ಸಾಧ್ಯವಿಲ್ಲ. ಹೀಗಾಗಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಯಾರು ಯಾರು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.
ಎಂಐಎಂ ಒಂಬತ್ತು ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದು, ಇದರಲ್ಲಿ ಏಳು ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ. ಒಂದು ವೇಳೆ ಅಧಿಕಾರ ಹಿಡಿಯಲು ಯಾವುದೇ ಪಕ್ಷಕ್ಕೆ ಆರೇಳು ಸ್ಥಾನ ಕಡಿಮೆ ಬಂದರೆ ಎಂಐಎಂ ಜೊತೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಇನ್ನೂ ಹೆಚ್ಚಿನ ಸೀಟುಗಳು ಬೇಕಾದರೆ ಸರ್ಕಾರ ರಚಿಸೋದು ಕಗ್ಗಂಟಾಗುವ ಸಾಧ್ಯತೆ ಇದೆ. ಬಿಜೆಪಿ ಏನಾದರೂ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಿದರೆ, ಸರ್ಕಾರ ರಚಿಸೋದಕ್ಕೆ ಕಷ್ಟವಾಗಬಹುದು.
ಆದ್ರೆ ತೆಲುಗು ಜನರು ದಶಕಗಳಿಂದ ಒಂದೇ ರೀತಿಯಲ್ಲಿ ಆಲೋಚನೆ ಮಾಡುತ್ತಾ ಬಂದಿದ್ದಾರೆ. ಮತ ಹಾಕಿದರೆ ಬಹುತೇಕೆ ಎಲ್ಲಾ ಕಡೆ ಒಂದೇ ಪಕ್ಷಕ್ಕೆ ಮತ ಹಾಕುತ್ತಾ ಬಂದಿದ್ದಾರೆ. ಈ ಹಿಂದೆ ಹಲವಾರು ಚುನಾವಣೆಗಳಲ್ಲಿ ಒಂದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಕೊಡುತ್ತಾ ಬಂದಿದ್ದಾರೆ. ಹೀಗಾಗಿ, ಸಮೀಕ್ಷೆಗಳು ಏನೇ ಹೇಳಿದರೂ, ಜನ ಈ ಬಾರಿಯೂ ಒಂದೇ ಪಕ್ಷಕ್ಕೆ ಅಧಿಕಾರ ಕೊಡುವ ನಿರೀಕ್ಷೆ ಕೂಡಾ ಇದೆ.