ಕನ್ನಡ ನುಡಿ ಕಟ್ಟುವ, ಉಳಿಸಿ ಬೆಳೆಸುವಲ್ಲಿ ಜಿಲ್ಲೆಯ ಕೊಡುಗೆ ಅಪಾರ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿ: ಕನ್ನಡ ನುಡಿಯನ್ನು ಕಟ್ಟುವ, ಉಳಿಸಿ ಬೆಳೆಸುವ ಕಾಯಕದಲ್ಲಿ ಉಡುಪಿ ಜಿಲ್ಲೆಯ ಕೊಡುಗೆ ಅಪಾರ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದರು.
ಇಲ್ಲಿನ ಅಜ್ಜರಕಾಡಿನ ಮಹಾತ್ಮಗಾಂಧಿ ಮೈದಾನದಲ್ಲಿ ಬುಧವಾರ ನಡೆದ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಚಿವರು, ನಾಡು ಹರಿದು ಹಂಚಿ ಹೋಗಿದ್ದ ಅಂದಿನ ದಿನಗಳಲ್ಲಿ ಕನ್ನಡ ನಾಡಿನಾದ್ಯಂತ ಬೇರೆ ಬೇರೆ ಭಾಗಗಳಿಗೆ ಹೋಗಿ ಬೆನಗಲ್ ರಾಮರಾಯರು, ಕೋಟ ಶಿವರಾಮ ಕಾರಂತರು, ಪಂಜೆ ಮಂಗೇಶರಾಯರು ಮತ್ತಿತರ ಹಿರಿಯರು ಕನ್ನಡ ಕಹಳೆಯನ್ನು ರಾಜ್ಯಾದ್ಯಂತ ಮೊಳಗಿಸಿದರು.
ನಂದಳಿಕೆ ಲಕ್ಷ್ಮೀನಾರಾಯಣ, ಗುಲ್ವಾಡಿ ವೆಂಕಟರಾಯರು, ಕೆ.ಶಿವರಾಮ ಕಾರಂತ, ಹಾವಂಜೆ ಲಕ್ಷ್ಮೀನಾರಾಯಣಪ್ಪಯ್ಯ, ಹಟ್ಟಿಯಂಗಡಿ ನಾರಾಯಣರಾಯರು, ಐರೋಡಿ ಶಿವರಾಮಯ್ಯ, ಮೊಗೇರಿ ಗೋಪಾಲಕೃಷ್ಣ ಅಡಿಗ, ಕಡೆಕಾರು ರಾಜಗೋಪಾಲಕೃಷ್ಣರಾಯ, ಎಸ್.ಯು ಪಣಿಯಾಡಿ, ಕೊರಡ್ಕಲ್ ಶ್ರೀನಿವಾಸರಾವ್, ಪಾ.ವೆಂ.ಆಚಾರ್ಯ, ಪಿ ಗುರುರಾಜ ಭಟ್, ಮಟಪಾಡಿ ರಾಜಗೋಪಾಲಾಚಾರ್ಯ ಮುಂತಾದ ಅನೇಕ ಕವಿಗಳು ಸೇರಿದಂತೆ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ ಕ್ಷೇತ್ರಗಳಿಗೆ ಈ ಜಿಲ್ಲೆಯ ಕೊಡುಗೆ ಅನನ್ಯವಾಗಿದೆ ಎಂದರು.
ಜಿಲ್ಲೆಯಲ್ಲಿ ಕನ್ನಡ ಭಾಷೆಯೊಂದೇ ಇಲ್ಲ. ಸ್ಥಳೀಯ ಭಾಷೆಗಳಾದ ತುಳು, ಕೊಂಕಣಿ, ಬ್ಯಾರಿ ಮತ್ತಿತರ ಭಾಷೆಗಳಿವೆ. ಇವೆಲ್ಲವನ್ನು ಬೇರೆ ಎಂದು ನಾವು ಎಂದೂ ಭಾವಿಸಿಯೇ ಇಲ್ಲ. ಈ ಅಚ್ಚ ಕನ್ನಡದ ಜಿಲ್ಲೆಯಲ್ಲಿ ಯಾರನ್ನೂ “ಇವನಾರವ ಇವನಾರವ ಎನ್ನದೇ” ಅಣ್ಣ ಬಸವಣ್ಣ ಹೇಳಿದಂತೆ “ಇವ ನಮ್ಮವ- ಇವ ನಮ್ಮವ’ ಎಂದು ಕೊಂಡಿದ್ದೇವೆ ಎಂದರು.
ಈ ವೇಳೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ, ಅಪರ ಪೊಲೀಸ್ ವರಿಷ್ಠಾಧಿಕಾರಿ ಸಿದ್ದ ಲಿಂಗಪ್ಪ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುರೇಂದ್ರ ಅಡಿಗ ಉಪಸ್ಥಿತರಿದ್ದರು.