ಚಿನ್ನದ ಗಣಿ ಸಮೀಪ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಹಿಳೆ!
ರಾಯಚೂರು; ಮಹಿಳೆಯೊಬ್ಬರ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲ್ಲೂಕಿನ ಹಟ್ಟಿಚಿನ್ನದ ಗಣಿ ಬಳಿ ಮಹಿಳೆಯ ಮೃತದೇಹ ಸಿಕ್ಕಿದೆ.
ಚಿನ್ನದಗಣಿ ಕ್ಯಾಂಪಿನ ಗುಂಡೂರಾವ್ ಕಾಲೊನಿಯಲ್ಲಿ ಈ ಘಟನೆ ನಡೆದಿದ್ದು, ನಲವತ್ತೈದು ವರ್ಷದ ಮಂಜುಳಾ ಸಾವನ್ನಪ್ಪಿರುವವರು ಎಂದು ಗುರುತಿಸಲಾಗಿದೆ. ಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿದ್ದರು.
ಮಂಜುಳಾ ಅವರ ಮನೆಯಿಂದ ಕೊಂಚ ದೂರದಲ್ಲೇ ಅವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಸಿಕ್ಕಿದೆ. ಕೊಲೆ ಮಾಡಿ ಬೆಂಕಿ ಹಚ್ಚಿರಬಹುದು ಅಂತ ಶಂಕೆ ವ್ಯಕ್ತವಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಕೂಡಾ ಬೆಂಕಿ ಹೊತ್ತಿ ಉರಿಯುತ್ತಿತ್ತು.