ಹುಲಿ ಉಗುರಿನ ಲಾಕೆಟ್ ಸಂಕಷ್ಟ; ರಾಜ್ಯಸಭಾ ಸದಸ್ಯ ಜಗ್ಗೇಶ್ ವಿರುದ್ಧ ದೂರು
ಬೆಂಗಳೂರು; ಹುಲಿ ಉಗುರಿನ ಲಾಕೆಟ್ ಹಲವರಿಗೆ ಸಂಕಷ್ಟ ತಂದೊಡ್ಡಿದೆ. ಹಲವರ ವಿರುದ್ಧ ದೂರುಗಳು ದಾಖಲಾಗುತ್ತಲೇ ಇವೆ. ನಟರು, ರಾಜಕಾರಣಿಗಳು ಈ ಹಿಂದೆ ಹುಲಿ ಉಗುರಿನ ಲಾಕೆಟ್ ಇರುವ ಸರ ಧರಿಸಿದ್ದ ಫೋಟೋಗಳು ವೈರಲ್ ಆಗುತ್ತಿದ್ದು, ಅವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುತ್ತಿದೆ.
ಬಿಜೆಪಿ ರಾಜ್ಯಸಭಾ ಸದಸ್ಯ ಹಾಗೂ ಹಾಸ್ಯ ನಟ ಜಗ್ಗೇಶ್ ಅವರು ಹುಲಿ ಉಗುರು ಲಾಕೆಟ್ ಬಗ್ಗೆ ಅವರೇ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಸಂಬಂಧ ನಟ ಜಗ್ಗೇಶ್ ವಿರುದ್ಧ ಕಾಂಗ್ರೆಸ್ನ ಮಾಜಿ ಎಂಎಲ್ಸಿ ಪಿ.ಆರ್. ರಮೇಶ್ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್‌ಗೆ ದೂರು ಕೊಟ್ಟಿದ್ದಾರೆ.
ಇನ್ನು ಅಧಿಕಾರಿಗಳು ಕೂಡಾ ಈ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ವನ್ಯಜೀವಿ ಅರಣ್ಯಾಧಿಕಾರಿ ರವೀಂದ್ರ ಕುಮಾರ್ ಈ ಬಗ್ಗೆ ಮಾತನಾಡಿದ್ದಾರೆ. ನಟ ಜಗ್ಗೇಶ್ ನಾನು ಧರಿಸಿದ್ದು ಒರಿಜಿನಲ್ ಹುಲಿ ಉಗುರು ಅಂತ ಅವರೇ ವಿಡಿಯೋದಲ್ಲಿ ಹೇಳಿದ್ದಾರೆ. ಜಗ್ಗೇಶ್ ಪ್ರಕರಣವನ್ನು ನಾವು ಪರಿಗಣಿಸುತ್ತೇವೆ ಎಂದು ರವೀಂದ್ರ ಕುಮಾರ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ನಮಗೆ ಅನೇಕ ದೂರುಗಳು ಹಾಗೂ ಸಂದೇಶಗಳು ಬರುತ್ತಿವೆ. ನಟ ದರ್ಶನ್ ವಿರುದ್ಧ ಕೂಡಾ ಕೆಲವರು ದೂರು ಕೊಟ್ಟಿದ್ದಾರೆ. ಆದ್ರೆ, ಅವರು ಬಳಸಿರೋದು ಹುಲಿಯ ನೈಜ ಉಗುರಾ ಎಂಬುದರ ಬಗ್ಗೆ ಪರಿಶೀಲನೆ ಮಾಡಬೇಕಾಗುತ್ತದೆ. ಹಸುವಿನ ಕೊಂಬನ್ನು ಹುಲಿ ಉಗುರಿನ ತರ ಮಾಡಿ ಕೆಲವರು ಮಾರಾಟ ಮಾಡುತ್ತಾರೆ. ಹೀಗಾಗಿ ನೈಜ ಹುಲಿ ಉಗುರು ಧರಿಸಿದ್ದರೆ ಮಾತ್ರ ಕ್ರಮ ಕೈಗೊಳ್ಳುತ್ತೇವೆ ಎಂದು ರವೀಂದ್ರ ಕುಮಾರ್ ಹೇಳಿದ್ದಾರೆ.
ವರ್ತೂರು ಸಂತೋಷ್ ಅವರನ್ನು ಕೂಡಾ ದೂರು ಬಂದಾಕ್ಷಣ ಬಂಧನ ಮಾಡಲಿಲ್ಲ. ಅವರು ಧರಿಸಿದ್ದು, ನೈಜ ಹುಲಿಯ ಉಗುರಾಗಿತ್ತು. ಅದರನ್ನು ಪರಿಶೀಲಿಸಿ ಖಚಿತಪಡಿಸಿಕೊಂಡ ಮೇಲೆ ಬಂಧನ ಮಾಡಿದ್ದೇವೆ ಎಂದೂ ಹೇಳಿದ್ದಾರೆ.