ಏಳು ವರ್ಷದ ಬಾಲಕಿ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ; ಕೇವಲ 13.7 ನಿಮಿಷದಲ್ಲಿ ಹೃದಯ ರವಾನೆ
ಬೆಂಗಳೂರು; ಹೃದ್ರೋಗದಿಂದ ಬಳಲುತ್ತಿದ್ದ ಏಳು ವರ್ಷದ ಬಾಲಕಿಗೆ ಹೃದಯ ಕಸಿ ಶಸ್ತ್ರ ಚಿಕಿತ್ಸೆಯನ್ನು ಆರ್ಆರ್ ನಗರದ ಸ್ಪರ್ಶ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಮಾಡಲಾಗಿದೆ. ಏಳು ವರ್ಷದ ಬಾಲಕಿ ಡೈಲೇಟೆಡ್ ಕಾರ್ಡಿಯೋಪಥಿ (ಹೃದಯದ ಮಾಂಸಖಂಡ ದುರ್ಬಲಗೊಂಡು ರಕ್ತವನ್ನು ಪಂಪ್ ಮಾಡಲು ಸಾಮರ್ಥ್ಯ ಕಡಿಮೆಯಾಗುವ ಸ್ಥಿತಿ)ಯಿಂದ ಬಳಲುತ್ತಿದ್ದಳು. ಈಕೆಗೆ 14 ವರ್ಷದ ಬಾಲಕನ ಹೃದಯ ಕಸಿ ಮಾಡಲಾಗಿದೆ.
ಶೇಷಾದ್ರಿಪುರಂನಿಂದ ಹೃದಯವನ್ನು ಸಾಗಿಸಲು ಹಸಿರು ಕಾರಿಡಾರ್ನ್ನು ವ್ಯವಸ್ಥೆ ಮಾಡಲಾಗಿತ್ತು. ಸುಮಾರು 14 ಕಿಲೋ ಮೀಟರ್ ದೂರವನ್ನು 13.7 ನಿಮಿಷಗಳಲ್ಲಿ ಕ್ರಮಿಸಲಾಯಿತು. ಡಾ ಅಶೋಕ್, ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಮತ್ತು ಹೃದಯ ಕಸಿ ವೈದ್ಯ, ಡಾ ಅಶ್ವಿನಿ ಕುಮಾರ್, ಹಿರಿಯ ಸಲಹೆಗಾರ, ಕಾರ್ಡಿಯೋ ನಾಳೀಯ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸಕ ಮತ್ತು ಹೃದಯ ಕಸಿ ಶಸ್ತ್ರಚಿಕಿತ್ಸಕ, ಡಾ ಮಧುಸೂದನ್, ಸಲಹೆಗಾರ ಕಾರ್ಡಿಯೋ ವಾಸ್ಕುಲರ್ ಮತ್ತು ಥೋರಾಸಿಕ್ ಸರ್ಜನ್ ಮುಂತಾದ ವೈದ್ಯರ ತಂಡ ಈ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.
ಶಸ್ತ್ರಚಿಕಿತ್ಸೆಗೊಳಗಾದ ಬಾಲಕಿಯ ಅಕ್ಕ ಕೂಢಾ 2019ರಲ್ಲಿ ಇದೇ ಸಮಸ್ಯೆಯಿಂದ ಸಾವನ್ನಪ್ಪಿದ್ದಳು. ಇದಾದ ಕೆಲ ತಿಂಗಳಲ್ಲೇ ಈ ಬಾಲಕಿಗೂ ಅದೇ ಸಮಸ್ಯೆ ಕಾಣಿಸಿಕೊಂಡಿತ್ತು. 2022ರಲ್ಲಿ ಈಕೆ ತುಂಬಾ ತೆಳ್ಳಗಿದ್ದಳು, ಕೇಲವ 17 ಕೆಜಿ ತೂಕವಿದ್ದಳು. ಇನ್ನು ಬಾಲಕಿಯ ರಕ್ತದ ಗುಂಪು O ನೆಗೆಟಿವ್ ಆಗಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ಆರೈಕೆ ಹಾಗೂ ಆಕೆಗೆ ಹೊಂದುವ ಹೃದಯ ಸಿಗುವವರೆಗೂ ಕಾಯಬೇಕಾಯ್ತು. 14 ವರ್ಷ ಬಾಲಕನ ಹೃದಯ ಈಕೆಗೆ ಹೊಂದುತ್ತಿದ್ದರಿಂದ ಸ್ಪರ್ಶ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.