ಮನೆಯಲ್ಲಿದ್ದವರ ಕೈಕಾಲು ಕಟ್ಟಿದ್ರು; ಹುಬ್ಬಳ್ಳಿ ಮನೆಯಲ್ಲಿ ಒಂದು ಕೋಟಿ ದೂಚಿದ್ರು!
ಹುಬ್ಬಳ್ಳಿ; ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ವಿಸರ್ಜನಾ ಕಾರ್ಯಕ್ರಮ ನಡೆಯುತ್ತಿತ್ತು. ಹೀಗಾಗಿ ಪೊಲೀಸರೆಲ್ಲಾ ಗಣೇ ಕಾರ್ಯಕ್ರಮದ ಕಡೆ ಇದ್ದರು. ಎಲ್ಲರೂ ಈ ಕಾರ್ಯಕ್ರಮದ ಮೇಲೇ ಗಮನ ಇಟ್ಟಿದ್ದರು. ದರೋಡೆಕೋರರಿಗೆ ಇದೇ ಸೂಕ್ತ ಸಮಯವಾಗಿತ್ತು. ಅದನ್ನು ಬಳಸಿಕೊಂಡು ಮನೆಯೊಂದಕ್ಕೆ ನುಗ್ಗಿದ ದರೋಡೆಕೋರರು, ಬರೋಬ್ಬರಿ 1 ಕೋಟಿ ರೂಪಾಯಿ ಬೆಲೆಬಾಳುವ ನಗ ನಾಣ್ಯ ದೋಚಿದ್ದಾರೆ.
ಹುಬ್ಬಳ್ಳಿಯ ಬಸವೇಶ್ವರ ನಗರದ ಲಕ್ಷ್ಮೀ ಲೇಔಟ್‌ನಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿದ್ದ ಆರು ಜನರ ಕೈಕಾಲು ಕಟ್ಟಿಹಾಕಿ ಈ ಕೃತ್ಯ ಎಸಗಲಾಗಿದೆ. ಬುಕ್ ಡಿಪೋ ಮಾಲೀಕ ಉಲ್ಲಾಸ್ ದೊಡ್ಡಮನಿ ಎಂಬವರ ಮನೆಯಲ್ಲಿ ಈ ದರೋಡೆ ನಡೆದಿದೆ. ಮನೆಯ ಕಿಟಕಿಯ ಸರಳುಗಳನ್ನು ಕತ್ತರಿಸಿ ದರೋಡೆಕೋರರು ಮನೆಗೆ ನುಗ್ಗಿದ್ದಾರೆ. ಬಳಿ ಮನೆಯಲ್ಲಿದ್ದವರನ್ನು ಬೆದರಿಸಿದ್ದಾರೆ. ಅವರ ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿದ್ದಾರೆ.
ಎಂಟು ದರೋಡೆಕೋರರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಪೊಲೀಸರೆಲ್ಲಾ ಈದ್ಗಾ ಮೈದಾನದಲ್ಲಿ ಇದ್ದುದರಿಂದ ಜನವಸತಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿರಲಿಲ್ಲ. ಇದೇ ಸಮಯವನ್ನು ನೋಡಿಕೊಂಡು ಈ ದರೋಡೆ ನಡೆದಿದೆ. ಗೋಕುಲ ಬಡಾವಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.