22 ವರ್ಷದವನಿದ್ದಾಗ ಎಮ್ಮೆ ಕದ್ದ, 80ನೇ ವರ್ಷದಲ್ಲಿ ಸಿಕ್ಕಿಬಿದ್ದ..!
ಬೀದರ್; ನಮ್ಮಲ್ಲಿ ಎಷ್ಟೋ ಅಪರಾಧ ಪ್ರಕರಣಗಳು ಸಾಲ್ವ್ ಆಗೋದೇ ಇಲ್ಲ. ನಾಪತ್ತೆಯಾದ ಆರೋಪಿಗಳು ಸಿಗದೇ ಪ್ರಕರಣಗಳು ಹಾಗೇ ಮುಚ್ಚಿಹೋಗುತ್ತಿರುತ್ತವೆ. ಅಂತಹದ್ದೇ ಒಂದು ಪ್ರಕರಣವಿದು. ಇದೇನೋ ದೊಡ್ಡ ಅಪರಾಧ ಪ್ರಕರಣವೇನಲ್ಲ. ಆದ್ರೆ ಇದರ ಆರೋಪಿಯನ್ನು ಹಿಡಿಯಲು ಪೊಲೀಸರು ಬರೋಬ್ಬರಿ 58 ವರ್ಷ ಹೆಣಗಾಡಿದ್ದಾರೆ. 22ನೇ ವಯಸ್ಸಿನಲ್ಲಿ ಎಮ್ಮೆಯೊಂದನ್ನು ಕದ್ದಿದ್ದ ಆರೋಪಿ, 58 ವರ್ಷಗಳ ಬಳಿಕ ಸಿಕ್ಕಿಬಿದ್ದಿದ್ದಾನೆ. ಇದೀಗ ಆತನ ವಯಸ್ಸು 80 ವರ್ಷ.
ಇದು 1965ರಲ್ಲಿ ನಡೆದಿದ್ದ ಪ್ರಕರಣ. ಮಹಾರಾಷ್ಟ್ರದ ಮೂಲದ ಕಿಶನ್ ಚಂದರ್ ಹಾಗೂ ಗಣಪತಿ ವಿಠಲ್ ವಾಗ್ಮೋರೆ ಎಂಬುವವರು ಭಾಲ್ಕಿ ಬಳಿ ಎರಡು ಎಮ್ಮೆ ಹಾಗೂ ಒಂದು ಕರುವನ್ನು ಕದ್ದಿದ್ದರು. ಎಮ್ಮೆಗಳ ಮಾಲೀಕ ಮುರಳೀಧರ ಕುಲಕರ್ಣಿಯವರು ಭಾಲ್ಕಿ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು, ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದರು.
ಆದ್ರೆ ಕೆಲ ದಿನಗಳ ಬಳಿಕ ಕಿಶನ್ ಚಂದರ್ ಹಾಗೂ ಗಣಪತಿ ವಿಠಲ್ ವಾಗ್ಮೋರೆಗೆ ಜಾಮೀನು ಸಿಕ್ಕಿತ್ತು. ಜಾಮೀನು ಪಡೆದ ಬಳಿಕ ಅವರಿಗೆ ಕಾನೂನು ಗೊತ್ತಿತ್ತೋ, ಗೊತ್ತಿಲ್ಲವೋ ಕೋರ್ಟ್ ವಿಚಾರಣೆಗೆ ಹಾಜರಾಗೇ ಇಲ್ಲ. ಅವರಿಗೆ ಸಮನ್ಸ್, ನೋಟಿಸ್, ವಾರಂಟ್ ಕಳುಹಿಸಿದರೂ ಕೇರ್ ಮಾಡಿಲ್ಲ. ಈ ನಡುವೆ ಆರೋಪಿಗಳಲ್ಲೊಬ್ಬನಾದ ಕಿಶನ್ ಚಂದರ್ 2006ರಲ್ಲಿ ಮೃತಪಟ್ಟಿದ್ದಾನೆ. ಮತ್ತೊಬ್ಬ ಆರೋಪಿ ಣಪತಿ ವಿಠಲ್ ವಾಗ್ಮೋರೆ ತಲೆಮರೆಸಿಕೊಂಡಿದ್ದರು. ಆದ್ರೆ ಇದೀಗ ಮಹಾರಾಷ್ಟ್ರದ ಲಾತೂರಿನ ಟಾಕಳಗಾಂವ್ ಎಂಬಲ್ಲಿ ಬೀದರ್ ಪೊಲೀಸರು ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ.