ಚಾಮುಂಡೇಶ್ವರಿಗೆ ಹರಕೆ ತೀರಿಸಿದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ
ಮೈಸೂರು; ಚುನಾವಣೆಗೆ ಮೊದಲು ಚಾಮುಂಡೇಶ್ವರಿಗೆ ಕಟ್ಟಿಕೊಂಡಿದ್ದ ಹರಕೆಯನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ತೀರಿಸಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ಚುನಾವಣೆ ವೇಳೆ ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸಿದ್ದಾರೆ.
ಮತದಾನಕ್ಕೆ ಎರಡು ದಿನ ಬಾಕಿ ಇರುವಾಗ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಚಾಮುಂಡಿ ದೇಗುಲಕ್ಕೆ ಭೇಟಿ ನೀಡಿ ಗ್ಯಾರೆಂಟಿ ಕಾರ್ಡ್ ಇಟ್ಟು ಪೂಜೆ ಸಲ್ಲಿಸಿದ್ದರು. ಈ ಗ್ಯಾರೆಂಟಿಗಳನ್ನು ಜಾರಿ ಮಾಡುವಷ್ಟು ಶಕ್ತಿ ಕೊಡು ಎಂದು ತಾಯಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬಂದಿದೆ. ಕೊಟ್ಟ ಐದು ಗ್ಯಾರೆಂಟಿಗಳಲ್ಲಿ ಮೂರು ಗ್ಯಾರೆಂಟಿಗಳು ಈಗಾಗಲೇ ಜಾರಿಯಲ್ಲಿವೆ. ನಾಲ್ಕನೇ ಗ್ಯಾರೆಂಟಿ ಗೃಹಲಕ್ಷ್ಮೀ ಯೋಜನೆಗೆ ನಾಳೆ ಮೈಸೂರಿನಲ್ಲಿ ಚಾಲನೆ ಸಿಗಲಿದೆ. ಈ ಹಿನ್ನೆಲೆಯಲ್ಲಿ ನಾಯಕರು, ಚಾಮುಂಡಿ ದರ್ಶನ ಮಾಡಿದ್ದಾರೆ.
ಇದೇ ವೇಳೆ ನಾಯಕರು ಚಾಮುಂಡಿಗೆ ಹಸಿರು ಮತ್ತು ಕೆಂಪು ಸೀರೆ ನೀಡಿ ಹರಕೆ ಸಲ್ಲಿಸಿದ್ದಾರೆ. ಕನಕಾಂಬರ, ಮಲ್ಲಿಗೆ, ಗುಲಾಬಿ ಹೂವಿನ ಹಾರ ಮತ್ತು ಫಲ ಸಮರ್ಪಣೆ ಕೂಡಾ ಮಾಡಿದ್ದಾರೆ.