ಲಕ್ನೋದಲ್ಲಿ ಉಡುಪಿ ರೀತಿಯ ಪ್ರಕರಣ; ವಿಡಿಯೋ ತೆಗೆದು ಸೀನಿಯರ್ಗೆ ಕಳಿಸ್ತಿದ್ದ ವಿದ್ಯಾರ್ಥಿನಿ..!
ಲಕ್ನೋ; ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋ ತೆಗೆದ ಪ್ರಕರಣ ವರದಿಯಾಗಿತ್ತು. ಇದು ದೊಡ್ಡ ಮಟ್ಟದಲ್ಲಿ ವಿವಾದಕ್ಕೂ ಕಾರಣವಾಗಿತ್ತು. ಇದೀಗ ಉತ್ತರ ಪ್ರದೇಶದಲ್ಲೂ ಇಂತಹದ್ದೇ ಒಂದು ಘಟನೆ ನಡೆದಿದೆ.
ಉತ್ತರ ಪ್ರದೇಶದ ಗಾಜಿಪುರದ ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿನಿಯೊಬ್ಬಳ ವಿರುದ್ಧ ಈ ಆರೋಪ ಕೇಳಿಬಂದಿದೆ. ಈಕೆ ಹಾಸ್ಟೆಲ್ನಲ್ಲಿ ತಮ್ಮ ರೂಮ್ಮೇಟ್ಸ್ ಅಶ್ಲೀಲ ವಿಡಿಯೋ ತೆಗೆದು ಅದನ್ನು ತನ್ನ ಸೀನಿಯರ್ ಹುಡುಗನಿಗೆ ಕಳುಹಿಸುತ್ತಿದ್ದಳು ಎಂದು ಹೇಳಲಾಗಿದೆ. ಈ ಬಗ್ಗೆ ಸಾಕ್ಷ್ಯ ಕೂಡಾ ಸಿಕ್ಕಿದೆ. ವಿಡಿಯೋ, ಫೋಟೋಗಳನ್ನು ತರಿಸಿಕೊಳ್ಳುತ್ತಿದ್ದ ಸೀನಿಯರ್ ವಿದ್ಯಾರ್ಥಿ ಮೊಹಮದ್ ಅಮೀರ್, ಅವುಗಳನ್ನು ಬಳಸಿಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಸಂತ್ರಸ್ತ ವಿದ್ಯಾರ್ಥಿನಿಯರು ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ ಮೇಲೆ ವಿಷಯ ಬಹಿರಂಗವಾಗಿದೆ. ಸದ್ಯ ಇಬ್ಬರೂ ಆರೋಪಿಗಳನ್ನು ಕಾಲೇಜಿನಿಂದ ಆರು ತಿಂಗಳ ಕಾಲ ಅಮಾನತು ಮಾಡಲಾಗಿದೆ. ಆರೋಪಿಗಳ ಮೊಬೈಲ್ಗಳಲ್ಲಿದ್ದ ವಿಡಿಯೋಗಳು ಹಾಗೂ ಫೋಟೋಗಳನ್ನು ಡಿಲೀಟ್ ಮಾಡಿಸಲಾಗಿದೆ. ಇನ್ನು ಬೇರೆ ಯಾರಿಗಾದರೂ ಅವುಗಳನ್ನು ಸೆಂಡ್ ಮಾಡಲಾಗಿದೆಯಾ ಎಂಬುದನ್ನು ಪರಿಶೀಲಿಸಲಾಗಿದೆ. ಇನ್ನು ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿದ್ದು, ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.