ಮಣಿಪುರ ಮಹಿಳೆಯರ ಬೆನ್ನಿಗೆ ಇಡೀ ದೇಶ ಇದೆ; ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುತ್ತೆ – ಮೋದಿ
ನವದೆಹಲಿ; ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಣಿಪುರ ಘಟನೆ ಬಗ್ಗೆ ಸ್ಪಷ್ಟವಾಗಿ ಉತ್ತರ ನೀಡಿದರು. ಮಣಿಪುರ ಹೆಣ್ಣು ಮಕ್ಕಳ ಪರವಾಗಿ ಇಡೀ ದೇಶವೇ ಇದೆ ಎನ್ನುವ ಮೂಲಕ ಮಣಿಪುರದ ಮಹಿಲೆಯರಿಗೆ ಮೋದಿ ಧೈರ್ಯ ತುಂಬಿದರು.
ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಉತ್ತರ ಕೊಟ್ಟ ನರೇಂದ್ರ ಮೋದಿ, ಮಣಿಪುರದ ಗಲಭೆ ವಿಚಾರವಾಗಿ ಮಾತನಾಡಿದರು. ಮಣಿಪುರದಲ್ಲಿ ಶಾಂತಿಯನ್ನು ನಾವು ಮರುಸ್ಥಾಪನೆ ಮಾಡುತ್ತೇವೆ. ಅಲ್ಲಿನ ಹೆಣ್ಣು ಮಕ್ಕಳ ರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಬದ್ಧವಾಗಿವೆ. ಇಡೀ ದೇಶವೇ ಅಲ್ಲಿನ ಹೆಣ್ಣು ಮಕ್ಕಳ ಬೆನ್ನಿಗಿದೆ ಎಂದು ಮೋದಿ ಹೇಳಿದರು.
ಮಣಿಪುರದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಈ ನಿಟ್ಟುನಲ್ಲಿ ಕೇಂದ್ರ ಸರ್ಕಾರ ಹಾಗೂ ಅಲ್ಲಿನ ರಾಜ್ಯ ಸರ್ಕಾರ ಶ್ರಮಿಸುತ್ತಿದೆ ಎಂದು ಮೋದಿ ಹೇಳಿದರು.
ಮಣಿಪುರದಲ್ಲಿ ಬಂಡಾಯ ಸಂಘಟನೆಗಳ ಅಪೇಕ್ಷೆಯಂತೆ ಎಲ್ಲವೂ ನಡೆಯುತ್ತಿತ್ತು. ಆಗ ಯಾವ ಸರ್ಕಾರ ಅಲ್ಲಿ ಆಡಳಿತದಲ್ಲಿತ್ತು ಎಂದು ಮೋದಿ ಪ್ರಶ್ನೆ ಮಾಡಿದರು. ಸರ್ಕಾರಿ ಕಚೇರಿಗಳಲ್ಲಿ ಮಹಾತ್ಮ ಗಾಂಧಿಯ ಭಾವಚಿತ್ರ ಹಾಕಲು ಅವಕಾಶ ನೀಡದಿದ್ದಾಗ ಮಣಿಪುರದಲ್ಲಿ ಯಾರ ಸರ್ಕಾರ ಇತ್ತು..? ಎಂದು ಪ್ರಶ್ನೆ ಮಾಡಿರುವ ಮೋದಿ, ವಿರೋಧ ಪಕ್ಷಗಳು ಆಯ್ದ ವಿಚಾರಗಳ ಬಗ್ಗೆ ಮಾತನಾಡುತ್ತಿವೆ. ಅವರಿಗೆ ರಾಜಕೀಯ ಅಷ್ಟೇ ಬೇಕಾಗಿದೆ. ಜನರ ನೋವುಗಳ ಬಗ್ಗೆ ಮಾತನಾಡುವುದು ಅವರಿಗೆ ಬೇಕಿಲ್ಲ ಎಂದು ಹೇಳಿದರು.