BengaluruPolitics

Exclusive; ರಾಜ್ಯದಿಂದ ಸಮರ್ಥರ ತಂಡ ಲೋಕಸಭೆಗೆ..!; 10 ಹಾಲಿ ಸಚಿವರು ಅಖಾಡಕ್ಕೆ..?

ಬೆಂಗಳೂರು; ಈ ಬಾರಿ ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎಯನ್ನು ಸೋಲಿಸೋದಕ್ಕೆ INDIA ಒಕ್ಕೂಟ ಸರ್ವ ಸನ್ನದ್ಧವಾಗುತ್ತಿದೆ. ಅದರ ಭಾಗವಾಗಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದ ಕರ್ನಾಟಕ ಕಾಂಗ್ರೆಸ್‌ ಕೂಡಾ ಲೋಕಸಭೆಗೆ ಸಮರ್ಥರ ತಂಡವೊಂದನ್ನು ಕಳುಹಿಸೋದಕ್ಕೆ ಮೆಗಾ ಪ್ಲ್ಯಾನ್‌ ಒಂದನ್ನು ರೂಪಿಸಿದೆ. ರಾಜ್ಯದ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ಸಮರ್ಥವಾಗಿ ಮಾತನಾಡುವ ಶಕ್ತಿ ಇರುವ, ರಾಜ್ಯಕ್ಕೆ ಬರಬೇಕಾದ ಪಾಲನ್ನು ಹೋರಾಡಿಯಾದರೂ ತರಬಲ್ಲ, ವಿರೋಧ ಪಕ್ಷಗಳಿಗೆ ಆಗಿಂದಾಗ್ಗೆ ಸಮರ್ಥವಾಗಿ ಉತ್ತರ ನೀಡಬಲ್ಲ ನಾಯಕರನ್ನು ಲೋಕಸಭಾ ಚುನಾವಣೆಗೆ ಕಣಕ್ಕಿಳಿಸೋದಕ್ಕೆ ರಾಜ್ಯ ಕಾಂಗ್ರೆಸ್‌ ಚಿಂತನೆ ನಡೆಸಿದೆ. ಅದರ ಭಾಗವಾಗಿ ರಾಜ್ಯ ಸರ್ಕಾರದಲ್ಲಿ ಹಾಲಿ ಇರುವ 10 ಸಚಿವರನ್ನು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸೋದಕ್ಕೆ ತಯಾರಿ ನಡೆದಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದಿಂದ ಕೇಂದ್ರಕ್ಕೆ ಅತಿಹೆಚ್ಚು ಜಿಎಸ್‌ಟಿ ಸಂಗ್ರಹಿಸಿ ಕಳುಹಿಸಲಾಗುತ್ತಿದೆ. ದೇಶದಲ್ಲಿ ಅತಿಹೆಚ್ಚು ಸಂಗ್ರಹವಾಗುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ವರ್ಷಕ್ಕೆ ಕರ್ನಾಟಕದಿಂದ ಸುಮಾರು 4 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತಿದೆ. ಆದ್ರೆ ಅದ್ರಲ್ಲಿ ರಾಜ್ಯಕ್ಕೆ ವಾಪಸ್‌ ಬರ್ತಿರೋದು ಕೇವಲ 50 ಸಾವಿರ ಕೋಟಿ ರೂಪಾಯಿ ಅಷ್ಟೇ. ಇನ್ನು ರಾಜ್ಯದಿಂದ ಆಯ್ಕೆಯಾಗಿರುವ ಹಾಲಿ ಸಂಸದರು, ಲೋಕಸಭೆಯಲ್ಲಿ ಸಮರ್ಥವಾಗಿ ರಾಜ್ಯದ ಪರವಾಗಿ ವಾದ ಮಾಡುತ್ತಿಲ್ಲ. ರಾಜ್ಯಕ್ಕೆ ಬೇಕಾದ ಅನುದಾನ ತರುತ್ತಿಲ್ಲ ಎಂಬ ಆರೋಪವಿದೆ. ಈ ಬಗ್ಗೆ ರಾಜ್ಯದ ಮತದಾರರಿಗೂ ಅಸಮಾಧಾನವಿದೆ. ಹೀಗಾಗಿ ಅದರ ಲಾಭ ಪಡೆದುಕೊಳ್ಳುವುದಕ್ಕೆ ಕಾಂಗ್ರೆಸ್‌ ಮುಂದಾಗಿದೆ. ಸಮರ್ಥ ನಾಯಕರನ್ನು ಕಣಕ್ಕಿಳಿಸಿ, ನಮ್ಮ ನಾಯಕರು ಸಮರ್ಥವಾಗಿ ಲೋಕಸಭೆಯಲ್ಲಿ ವಾದ ಮಂಡಿಸಲಿದ್ದಾರೆ. ಸಮರ್ಥ ಚರ್ಚೆ ನಡೆಸಲಿದ್ದಾರೆ. ನಮ್ಮ ಈ ನಾಯಕರಿಗೆ ಮತ ಹಾಕಿದರೆ ಕೇಂದ್ರದಿಂದ ಹೆಚ್ಚು ಅನುದಾನ ತರಲು ಸಾಧ್ಯವಾಗುತ್ತದೆ.  ಕಾವೇರಿ ವಿವಾದ, ಕಳಸಾ ಬಂಡೂರಿ, ಮೇಕೆದಾಟು ನೀರಾವರಿ ಯೋಜನೆ ಸೇರಿದಂತೆ ಹಲವು ವಿವಾದಗಳ ಬಗ್ಗೆಯೂ ಸಮರ್ಥವಾಗಿ ಮಾತನಾಡುವ ಈ ನಾಯಕರಿಗಿದೆ ಎಂದು ಬಿಂಬಿಸುವ ಉದ್ದೇಶ ಕಾಂಗ್ರೆಸ್‌ ನಾಯಕರು ಹೊಂದಿದ್ದಾರೆ. ಹೀಗಾಗಿ, ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಹಾಲಿ ಇರುವ ಹತ್ತು ಸಚಿವರನ್ನು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವುದಕ್ಕೆ ಚಿಂತನೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು ನಗರದಲ್ಲಿ ಬಿಜೆಪಿ ಪ್ರಾಬಲ್ಯವಿದ್ದು, ಬಿಜೆಪಿ ಸಂಸದರೇ ಎಲ್ಲರೂ ಇದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಸಂಸದರಿದ್ದಾರೆ. ಇಡೀ ರಾಜ್ಯದಲ್ಲಿ ಸದ್ಯ ಕಾಂಗ್ರೆಸ್‌ಗೆ ಇರೋದು ಒಬ್ಬರೇ ಸಂಸದರು. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಗೆದ್ದಿದೆ. ಇನ್ನು ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರರಾಗಿ ಗೆದ್ದಿದ್ದ ಸುಮಲತಾ ಅಂಬರೀಶ್‌ ಕೂಡಾ ಈಗ ಬಿಜೆಪಿಯ ಬಾಗಿಲಲ್ಲಿ ನಿಂತಿದ್ದಾರೆ. ಉಳಿದಂತೆ ಹಾಸನ ಕ್ಷೇತ್ರ ಜೆಡಿಎಸ್‌ ತೆಕ್ಕೆಯಲ್ಲಿದೆ. ಆದ್ರೆ ಈ ಬಾರಿ ರಾಜ್ಯದಲ್ಲಿ ಕನಿಷ್ಠ 25 ಸ್ಥಾನ ಗೆಲ್ಲೋದಕ್ಕೆ ಕಾಂಗ್ರೆಸ್‌ ಪ್ಲ್ಯಾನ್‌ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹಾಲಿ ಸಚಿವರಾದ ದಿನೇಶ್‌ ಗುಂಡೂರಾವ್‌, ಕೃಷ್ಣಬೈರೇಗೌಡ ಸೇರಿದಂತೆ ಹಲವು ಪ್ರಮುಖರನ್ನು ಅಖಾಡಕ್ಕಿಳಿಸಲು ಮುಂದಾಗಿದೆ. ಕೃಷ್ಣ ಬೈರೇಗೌಡ ಅವರು, ಈ ಹಿಂದೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಕಣಕ್ಕಿಳಿದಿದ್ದರು. ಅಂದಿನ ಬಿಜೆಪಿ ಅಭ್ಯರ್ಥಿ ಅನಂತ್‌ಕುಮಾರ್‌ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು. ಸದ್ಯ ಅಲ್ಲಿ ತೇಜಸ್ವಿ ಸೂರ್ಯ ಹಾಲಿ ಸಂಸದರು. ಕಳೆದ ಚುನಾವಣೆಯಲ್ಲಿ ಅನಂತ್‌ಕುಮಾರ್‌ ಅವರ ಸಾವಿನ ಹಿನ್ನೆಲೆಯಲ್ಲಿ ಬಿಜೆಪಿಗೆ ಸಿಂಪಥಿ ಮತಗಳು ಹೆಚ್ಚು ಬಂದಿದ್ದವು. ಆದ್ರೆ ಈ ಬಾರಿ ತೇಜಸ್ವಿ ಸೂರ್ಯ ಅಷ್ಟೇನೂ ಹೇಳಿಕೊಳ್ಳುವಂತಹ ಕೆಲಸ ಮಾಡಿಲ್ಲ. ಜೊತೆಗೆ ಸಾಕಷ್ಟು ವಿವಾದಗಳನ್ನೂ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಕೃಷ್ಣಬೈರೇಗೌಡರನ್ನು ಕಣಕ್ಕಿಳಿಸಿದರೆ ಗೆಲ್ಲೋ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕೃಷ್ಣಬೈರೇಗೌಡರನ್ನು ಕಣಕ್ಕಿಳಿಸಬಹುದೇ ಎಂಬುದರ ಬಗ್ಗೆ ಚಿಂತನೆ ನಡೆಸುತ್ತಿದೆ.

ಇನ್ನು ಪಿ.ಸಿ.ಮೋಹನ್‌ ಅವರು ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಆದ್ರೆ ಈ ಬಾರಿ ಈ ಕ್ಷೇತ್ರದಲ್ಲೂ ಸಮರ್ಥರನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್‌ಗೆ ಗೆಲುವು ಸಾಧ್ಯ ಎಂಬ ಮಾತುಗಳಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಗಂಭೀರ ಚಿಂತನೆ ನಡೆಸಿದೆ. ಇಲ್ಲಿ ದಿನೇಶ್‌ ಗುಂಡೂರಾವ್‌ ಅವರನ್ನು ಕಣಕ್ಕಿಳಿಸಿದರೆ ಹೆಚ್ಚು ಮತ ಪಡೆಯೋದಕ್ಕೆ ಸಾಧ್ಯ ಎಂಬ ಲೆಕ್ಕಾಚಾರ ಕಾಂಗ್ರೆಸ್‌ ನಾಯಕರದ್ದು. ದಿನೇಶ್‌ ಗುಂಡೂರಾವ್‌ ಅವರನ್ನು ಕಣಕ್ಕಿಳಿಸಿದರೆ ಹಿಂದೂ ಧರ್ಮದ ಬಹುತೇಕ ಎಲ್ಲಾ ವರ್ಗದ ಮತದಾರರೂ ಕೈ ಹಿಡಿಯುತ್ತಾರೆ. ಜೊತೆಗೆ ಈ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿರುವ ಮುಸ್ಲಿಂ ಮತಗಳು ಕೂಡಾ ಸಾಲಿಡ್‌ ಆಗಿ ಕಾಂಗ್ರೆಸ್‌ಗೆ ಬರಲಿವೆ ಎಂಬ ಲೆಕ್ಕಾಚಾರ ಇದೆ.

ಇನ್ನೊಂದೆಡೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಡಿ.ಬಿ.ಸದಾನಂದಗೌಡರು ಎರಡು ಬಾರಿ ಗೆದ್ದಿದ್ದಾರೆ. ಅವರು ಕೇಂದ್ರ ಮಂತ್ರಿಯೂ ಆಗಿದ್ದರು. ಆದ್ರೆ ವಿವಾದಗಳ ಕಾರಣದಿಂದಾಗಿ ಅವರನ್ನು ಮಂತ್ರಿಮಂಡಲದಿಂದ ಕೈಬಿಡಲಾಯಿತು. ಅದರ ನಂತರ ಅವರು ಪಕ್ಷದಲ್ಲಿ ಬಹುತೇಕ ಮೂಲೆಗುಂಪಾಗಿದ್ದಾರೆ. ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಈ ಬಾರಿ ಅವರಿಗೆ ಬಿಜೆಪಿಯಿಂದ ಟಿಕೆಟ್‌ ಸಿಗೋದು ಕೂಡಾ ಡೌಟು. ಈ ಎಲ್ಲಾ ಕಾರಣದಿಂದ ಬೆಂಗಳೂರು ಉತ್ತರ ಕ್ಷೇತ್ರದಲ್ಲೂ ಬಿಜೆಪಿ ವಿರೋಧಿ ಅಲೆ ಇದೆ ಎನ್ನಲಾಗುತ್ತಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಕಾಂಗ್ರೆಸ್‌  ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸೋದಕ್ಕೆ ಚಿಂತನೆ ಮಾಡುತ್ತಿದೆ.

ಇತ್ತ ಕಲಬುರ್ಗಿ ಲೋಕಸಭಾ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲನುಭವಿಸಿದ್ದರು. ಅವರು ಈ ಹಿಂದೆ ಸತತವಾಗಿ ಎಂಟು ಬಾರಿ ಆಯ್ಕೆಯಾಗಿ ಬಂದಿದ್ದರು. ಇದೀಗ ಮಲ್ಲಿಕಾರ್ಜುನಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಅವರು ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಸುತ್ತಾಡಿ ಪಕ್ಷ ಸಂಘಟನೆ ಹಾಗೂ ಪ್ರಚಾರದಲ್ಲಿ ಭಾಗಿಯಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅಲ್ಲಿ ರಾಜ್ಯ ಸರ್ಕಾರದ ಹಾಲಿ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಕಣಕ್ಕಿಳಿಸೋ ಬಗ್ಗೆ ಕಾಂಗ್ರೆಸ್‌ ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ. ಇನ್ನು ಧರಂ ಸಿಂಗ್‌ ಪುತ್ರ ಅಜಯ್‌ ಸಿಂಗ್‌ ಸೇರಿದಂತೆ ಹಲವರನ್ನು ಕೂಡಾ ಕಣಕ್ಕಿಳಿಸೋಕ್ಕೆ ಕಾಂಗ್ರೆಸ್‌ ಮುಂದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಒಂದು ಕಡೆ ಹತ್ತು ಹಾಲಿ ಸಚಿವರನ್ನು ಹಾಗೂ ಇನ್ನೂ ಹಲವು ಸಮರ್ಥ ನಾಯಕರನ್ನು ಲೋಕಸಭೆಯಿಂದ ಕಣಕ್ಕಿಳಿಸಿ ಹೆಚ್ಚು ಸ್ಥಾನ ಗೆಲ್ಲುವುದು ಕಾಂಗ್ರೆಸ್‌ ಗುರಿ. ಜೊತೆಗೆ, ಲೋಕಸಭೆಗೆ ರಾಜ್ಯದಿಂದ ಪ್ರಬಲವಾದ ಒಂದು ತಂಡ ಹೋದರೆ ಅಲ್ಲಿ ರಾಜ್ಯದ ಸಮಸ್ಯೆಗಳ ಪರವಾಗಿ ಪ್ರಬಲವಾಗಿ ಮಾತನಾಡಲು ಸಾಧ್ಯ ಎಂಬ ಲೆಕ್ಕಾಚಾರ ಕಾಂಗ್ರೆಸ್‌ನದ್ದು. ಇನ್ನು ಹತ್ತು ಹಾಲಿ ಸಚಿವರನ್ನು ಲೋಕಸಭೆಗೆ ಕಣಕ್ಕಿಳಿಸಿದರೆ, ಅವರು ಗೆದ್ದರೆ ವಿಧಾನಸಭಾ ಸ್ಥಾನಗಳು ಖಾಲಿಯಾಗುತ್ತವೆ. ಅಲ್ಲಿ, ಸಮರ್ಥರಿರುವ, ಕಳೆದ ಚುನಾವಣೆಯಲ್ಲಿ ಟಿಕೆಟ್‌ ವಂಚಿತರಿಗೆ ಅವಕಾಶ ನೀಡಬಹುದು. ಜೊತೆಗೆ ತೆರವಾಗುವ ಸಚಿವ ಸ್ಥಾನಗಳನ್ನು ಬೇರೊಬ್ಬರಿಗೆ ಕೊಡಬಹುದು. ಇದರಿಂದ ಅಸಮಧಾನವನ್ನೂ ತಣಿಸಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಇದೆ.

 

Share Post