ಶ್ರಾವಣ ಮಾಸದಲ್ಲಿ ಮಾಂಸಾಹಾರ ತ್ಯಜಿಸುವುದೇಕೆ..?; ಇದರ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ ಗೊತ್ತಾ..?
ಬೆಂಗಳೂರು; ಶ್ರಾವಣ ಮಾಸ ನಿರಂತರವಾಗಿ ಮಳೆ ಸುರಿಯುವ ಸಮಯ. ದೇವರುಗಳು ನಮಗೆ ಆಶೀರ್ವಾದ ರೂಪದಲ್ಲಿ ಮಳೆ ಸುರಿಸುತ್ತಾರೆ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಹೀಗಾಗಿಯೇ ಶ್ರಾವಣ ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಮಾಸ. ಈ ತಿಂಗಳಲ್ಲಿ ಜನರು ಶಿವನನ್ನು ಆರಾಧಿಸುತ್ತಾರೆ. ಜೊತೆಗೆ ತಮ್ಮ ತಮ್ಮ ಮನೆ ದೇವರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಾರೆ. ಜೊತೆಗೆ ಇಡೀ ತಿಂಗಳು ಅತಿ ಪವಿತ್ರವಾಗಿರುತ್ತಾರೆ. ಮಾಂಸಾಹಾರಿಗಳು ಈ ತಿಂಗಳು ಕಡ್ಡಾಯವಾಗಿ ಮಾಂಸಾಹಾರ ತ್ಯಜಿಸುತ್ತಾರೆ. ಇಡೀ ತಿಂಗಳು ಮಾಂಸವನ್ನು ಮುಟ್ಟೋದಿಲ್ಲ. ತಲೆತಲಾಂತರದಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದ್ರೆ, ಇದೊಂದು ಪದ್ಧತಿ ಅಷ್ಟೇ ಅಲ್ಲ, ಇದರ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ.
ಶ್ರಾವಣದಲ್ಲಿ ಮಾಂಸಾಹಾರ ತ್ಯಜಿಸೋದಕ್ಕೆ ವೈಜ್ಞಾನಿಕ ಕಾರಣಗಳೇನು..?
ಮೀನುಗಳ ಸಂತಾನೋತ್ಪಯ ಸಮಯ
ಶ್ರಾವಣ ಮಾಸದಲ್ಲಿ ಹೆಚ್ಚಿನ ಜನರು ಸಾತ್ವಿಕ ಆಹಾರ ಕ್ರಮವನ್ನು ಅನುಸರಿಸುತ್ತಾರೆ. ತಮ್ಮ ಆಹಾರದಲ್ಲಿ ಮಾಂಸಾಹಾರಿ ಮತ್ತು ಮದ್ಯವನ್ನು ತಪ್ಪಿಸುತ್ತಾರೆ. ಇದೊಂದು ಹಿಂದೂ ಕಟ್ಟಲೆಯಾದರೂ, ಇದರ ಹಿಂದೆ ವಿಜ್ಞಾನವೂ ಅಡಗಿದೆ. ಹಿಂದೂಗಳ ಪ್ರಕಾರ ಇದೊಂದು ಪ್ರೀತಿಯ ತಿಂಗಳು. ಈ ತಿಂಗಳಲ್ಲಿ ಮೀನುಗಳಂತಹ ಜಲಚರಗಳ ಸಂತಾನೋತ್ಪತ್ತಿಗೆ ಅನುಕೂಲಕರ ಪರಿಸ್ಥಿತಿ ಇರುತ್ತದೆ. ಹೀಗಾಗಿ ಶ್ರಾವಣವನ್ನು ಪ್ರೀತಿಯ ತಿಂಗಳು ಎಂದು ಕರೆಯಲಾಗುತ್ತದೆ. ಗೌರವದ ಸೂಚಕವಾಗಿ, ಗರ್ಭಿಣಿಯಾಗಿರುವ ಅಥವಾ ಮೊಟ್ಟೆ ಇಡುವ ಜೀವಿಗಳಿಗೆ ಹಾನಿ ಮಾಡುವುದು ಅಥವಾ ಕೊಲ್ಲುವುದು ಸೂಕ್ತವಲ್ಲ ಎಂದು ಪರಿಗಣಿಸಲಾಗಿದೆ. ಹೀಗಾಗಿಯೇ ಈ ತಿಂಗಳಲ್ಲಿ ಜಲಚರಗಳು ಸೇರಿ ಯಾವುದೇ ಮಾಂಸಾಹಾರ ಮಾಡುವುದನ್ನು ಹಿಂದೂಗಳು ನಿಲ್ಲಿಸುತ್ತಾರೆ.
ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುವುದಿಲ್ಲ..!
ಶ್ರಾವಣದಲ್ಲಿ ಯಾವಾಗಲೂ ಮಳೆ ಹಾಗೂ ಮೋಡ ಮುಚ್ಚಿದ ವಾತಾವರಣ ಇರಲಿದೆ. ಇದರಿಂದಾಗಿ ಸೂರ್ಯ ಶಾಖ ನಮ್ಮ ಮೇಲೆ ಬೀಳುವುದಿಲ್ಲ. ಇದರಿಂದಾಗಿ ನಾವು ಕಡಿಮೆ ವಿಟಮಿನ್ ಡಿ ಪಡೆಯುತ್ತೇವೆ. ವಿಟಮಿನ್ ಡಿ ಕೊರತೆಯು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸಂಕೀರ್ಣಗೊಳಿಸುತ್ತದೆ ಮತ್ತು ನಿಧಾನಗೊಳಿಸುತ್ತದೆ. ಹೀಗಾಗಿ ಈ ವೇಳೆ ಮಾಂಸಾಹಾರ ಸೇವಿಸನೆ ಮಾಡಿದರೆ ನಮ್ಮ ದೇಹಕ್ಕೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ಈ ಮಾಸದಲ್ಲಿ ಮಾಂಸಾಹಾರ ಸೇವಿಸುವುದಿಲ್ಲ.
ಸಾಂಕ್ರಾಮಿಕ ರೋಗಳ ಸಮಯ
ಈ ಸಮಯದಲ್ಲಿ ಮಾಂಸಾಹಾರಿ ಪದಾರ್ಥಗಳು ನೀರಿನಿಂದ ಹರಡುವ ರೋಗಗಳಿಗೆ ತುತ್ತಾಗುತ್ತವೆ. ಆದ್ದರಿಂದ ಮಾನವ ದೇಹವು ಈ ಆಹಾರವನ್ನು ಸೇವಿಸಿದರೆ ಸೋಂಕು ತಗಲುವ ಅಪಾಯವಿದೆ.
ಆರ್ಯವೇದ ಏನು ಹೇಳುತ್ತದೆ..?
ಆಯುರ್ವೇದದ ಪ್ರಕಾರ, ಶ್ರಾವಣ ಮಾಸದಲ್ಲಿ ನಮ್ಮ ರೋಗನಿರೋಧಕ ಶಕ್ತಿ ಕಡಿಮೆ ಮಟ್ಟದಲ್ಲಿರುತ್ತದೆ. ಈ ತಿಂಗಳಲ್ಲಿ ಮಾಂಸಾಹಾರ, ಮಸಾಲೆಯುಕ್ತ ಅಥವಾ ಎಣ್ಣೆಯುಕ್ತ ಆಹಾರವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಇನ್ನಷ್ಟು ಕಡಿಮೆಯಾಗುತ್ತದೆ. ಜೀರ್ಣಾಂಗ ವ್ಯವಸ್ಥೆ ದುರ್ಬಲವಾಗಿ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಈ ಕಾರಣಕ್ಕಾಗಿಯೇ, ಆಯುರ್ವೇದವು ಈ ಸಮಯದಲ್ಲಿ ಲಘು ಆಹಾರವನ್ನು ಸೇವಿಸಬೇಕೆಂದು ಹೇಳುತ್ತದೆ.
ಶ್ರಾವಣ ಮಾಸದಲ್ಲಿ ನಮ್ಮ ದೇಹ ತುಂಬಾ ದುರ್ಬಲವಾಗುತ್ತದೆ. ನಿಧಾನವಾದ ಚಯಾಪಚಯ ಕ್ರಿಯೆಯಿಂದ ದುರ್ಬಲ ಜೀರ್ಣಾಂಗ ವ್ಯವಸ್ಥೆ, ಸೋಂಕುಗಳು ಮತ್ತು ಆಲಸ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಈ ತಿಂಗಳು ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ. ಒಬ್ಬ ವ್ಯಕ್ತಿಯು ಮಾಂಸಾಹಾರವನ್ನು ಸೇವಿಸಿದರೆ, ಎಲ್ಲಾ ವಿಚಾರಗಳಲ್ಲೂ ತೊಂದರೆಯಾಗುತ್ತದೆ. ನಮ್ಮ ಇಡೀ ದೇಹದ ಚಕ್ರಕ್ಕೆ ಅಡ್ಡಿಯಾಗುತ್ತದೆ. ನಮ್ಮ ದೇಹದಲ್ಲಿ ಅಸಮತೋಲನವನ್ನು ಉಂಟುಮಾಡುತ್ತದೆ. ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ, ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸುವುದನ್ನು ತಪ್ಪಿಸಬೇಕು.
ಶ್ರಾವಣ ಮಾಸವನ್ನು ಎಲ್ಲಾ ಪ್ರಾಣಿಗಳ ಸಂತಾನೋತ್ಪತ್ತಿ ಕಾಲವೆಂದು ಪರಿಗಣಿಸಲಾಗುತ್ತದೆ. ಜಲಚರ ಹಾಗೂ ಭೂಮಿಯ ಮೇಲಿರುವ ಬಹುತೇಕ ಪ್ರಾಣಿಗಳು ಈ ಸಮಯದಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಗರ್ಭ ಧರಿಸಿರುವ ಪ್ರಾಣಿಗಳನ್ನು ಕೊಲ್ಲದಿರಲೆಂದು ಈ ಪದ್ಧತಿ ಅನುಸರಿಸಲಾಗುತ್ತಿದ್ದು, ಹಿಂದೂಗಳು ಈ ಮಾಸವನ್ನು ಪ್ರೀತಿಯ ಮಾಸ ಎಂದು ಪರಿಗಣಿಸಿದ್ದಾರೆ.