DistrictsNational

ಬೆಳೆಹಾನಿ ಪರಿಹಾರಕ್ಕಾಗಿ ಕೇಂದ್ರಕ್ಕೆ ಬೇಡಿಕೆ; ಸಿಎಂ ಬೊಮ್ಮಾಯಿ

ತುಮಕೂರು:  ಬೆಳೆ ಹಾನಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಕೋರಿ ಕೇಂದ್ರ ಸರ್ಕಾರದ ಪ್ರಕೃತಿ ವಿಕೋಪ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ತುಮಕೂರಿನ ಸಿದ್ಧಗಂಗಾಮಠದ ಶ್ರೀ ಶಿವಕುಮಾರ ಸ್ವಾಮಿಗಳ ಗದ್ದುಗೆಗೆ ದ್ವಿತೀಯ ವರ್ಷದ ಲಕ್ಷ ಪುಷ್ಪ ಬಿಲ್ವಾರ್ಚನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸಿಎಂ ಮಾಧ್ಯಮದವರೊಂದಿಗೆ ಮಾತನಾಡಿದರು. ಹಣಕಾಸಿನ ಅವಶ್ಯಕತೆ ಇದ್ದಲ್ಲಿ ಕೂಡಲೇ ತಿಳಿಸುವಂತೆ ಕೇಂದ್ರ ಸರ್ಕಾರ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಲು ತಕ್ಷಣವೇ ಒಂದು ತಂಡವನ್ನು ಕಳುಹಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ರಾಜ್ಯ ಸರ್ಕಾರದಿಂದ ಕೂಡಾ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಜಿಲಾಡಳಿತಗಳಲ್ಲಿ  ಬೆಳೆ ಹಾನಿಗೆ 685 ಕೋಟಿ ರೂ.ಗಳು  ಈಗಾಗಲೇ ಲಭ್ಯವಿದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಪರಿಹಾರ ಆಪ್ ನಲ್ಲಿ ಮಾಹಿತಿ ಆಪ್ ಲೋಡ್ ಮಾಡಿದವರಿಗೆ ಪರಿಹಾರವನ್ನು ವಿತರಿಸಲಾಗುತ್ತಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಕೋವಿಡ್ ನಿಯಂತ್ರಣಕ್ಕೆ ಕಟ್ಟೆಚ್ಚರ:

ಕೋವಿಡ್ 19 ಅಲ್ಲಲ್ಲಿಸಾಂಕ್ರಾಮಿಕ ಕ್ಲಸ್ಟರ್ ನಲ್ಲಿ ಕಂಡುಬರುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕಂಟೇನ್ಮೆಂಟ್ ವಲಯಗಳನ್ನು ಮಾಡಿ, ಸಂಪರ್ಕಿತರ ಪರೀಕ್ಷೆ, ಕ್ವಾರಂಟೈನ್ ಮಾಡಲಾಗಿದೆ. ಕೆಲವು ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗಿದೆ. ವಿಮಾನದ ಮೂಲಕ ವಿದೇಶಗಳಿಂದ  ಬರುವ ಪ್ರತಿಯೊಬ್ಬರನ್ನು ಪರೀಕ್ಷಿಸಲಾಗುತ್ತಿದೆ. ನೆಗೆಟಿವ್ ವರದಿ ಬಂದ ನಂತರವೇ ನಗರ ಪ್ರವೇಶಕ್ಕೆ ಅವಕಾಶ ನೀಡಲು ಸೂಚನೆ ನೀಡಲಾಗಿದೆ. ಕೇರಳದಿಂದ ರಾಜ್ಯಕ್ಕೆ ಪ್ರವೇಶಿಸುವವರ ಮೇಲೆಯೂ ದೊಡ್ಡ ಪ್ರಮಾಣದಲ್ಲಿ ನಿಗಾ ಇರಿಸಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿಯೂ ಕಟ್ಟೆಚ್ಚರ ವಹಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಕೇರಳದ ವಿದ್ಯಾರ್ಥಿಗಳು, ನರ್ಸಿಂಗ್ ಸಿಬ್ಬಂದಿ ಇವರುಗಳ ಬಗ್ಗೆಯೂ ನಿಗಾ ವಹಿಸಲಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಹೊಸ ತಳಿಯ ಬಗ್ಗೆ ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ನಿರ್ದೇಶನಗಳಂತೆ ಕರ್ನಾಟಕದಲ್ಲಿ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ. ಶಾಲಾ ಕಾಲೇಜುಗಳ ಮೇಲೆಯೂ ನಿಗಾ ವಹಿಸಿದ್ದು, ಎಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೋ, ಅಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Share Post