ಪ್ರೀತ್ಸೆ ಅಂತ ಪ್ರಾಣ ತಿಂದ; 21 ಯುವತಿಯ ಸಾವಿಗೆ ಕಾರಣನಾದ..!
ಮೈಸೂರು; ಯುವಕನೊಬ್ಬ ಎಷ್ಟು ಹೇಳಿದರೂ ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದಿದ್ದು, ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ತಾಲ್ಲೂಕಿನ ಗಣಗರಹುಂಡಿ ಗ್ರಾಮದಲ್ಲಿ ನಡೆದಿದೆ. 21 ವರ್ಷದ ಹರ್ಷಿತಾ ಎಂಬಾಕೆ ಪಾಗಲ್ ಪ್ರೇಮಿಯೊಬ್ಬನ ಕಾಟಕ್ಕೆ ಪ್ರಾಣವನ್ನೇ ತೆಗೆದುಕೊಂಡಿದ್ದಾಳೆ. ಕೀಟನಾಶಕ ಮಾತ್ರೆಗಳನ್ನು ಸೇವಿಸಿ ಹರ್ಷಿತಾ ಆತ್ಮಹತ್ಯೆ ಮಾಡಿಕೊಂಡಿದ್ದು, ಆರೋಪಿ ಶಿವು ಪರಾರಿಯಾಗಿದ್ದಾರೆ.
ಗಣಗರಹುಂಡಿ ಗ್ರಾಮದಲ್ಲೇ ವಾಸವಿದ್ದ ಶಿವು ಪದೇ ಪದೇ ಹರ್ಷಿತಾಗೆ ಲವ್ ಪ್ರಪೋಸ್ ಮಾಡಿದ್ದ. ಆದ್ರೆ ಹರ್ಷಿತಾ ಹಲವಾರು ಬಾರಿ ತಿರಸ್ಕರಿಸಿದ್ದಾಳೆ. ಹೀಗಿದ್ದರೂ, ಆತನ ಕಾಟ ಮಾತ್ರ ನಿಂತಿಲ್ಲ. ಪದೇ ಪದೇ ಹಿಂದೆ ಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಮನನೊಂದ ಹರ್ಷಿತಾ ಕೀಟನಾಶಕ ಮಾತ್ರೆ ಸೇವಿಸಿದ್ದಳು. ಕೂಡಲೇ ಪೋಷಕರು ಆಸ್ಪತ್ರೆಗೆ ಸೇರಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಹರ್ಷಿತಾ ಸಾವನ್ನಪ್ಪಿದ್ದಾಳೆ. ಹರ್ಷಿತಾಗೆ ಬೇರೆ ಹುಡುಗನ ಜೊತೆ ಮದುವೆ ನಿಶ್ಚಯವಾಗಿತ್ತು. ಆಷಾಢ ಮುಗಿದ ಮೇಲೆ ಮದುವೆ ನಡೆಯಬೇಕಿತ್ತು. ಇದನ್ನೂ ತಿಳಿದೂ ಶಿವು ಹಿಂದೆ ಬಿದ್ದಿದ್ದರಿಂದ ಹರ್ಷಿತಾ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಯುವತಿಯ ತಂದೆ ವೇಣುಗೋಪಾಲ್ ಆರೋಪ ಮಾಡಿದ್ದಾರೆ. ಇಲವಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.