ರಾಜಕಾಲುವೆ ಮೇಲೇ ಮನೆ; ಒತ್ತುವರಿ ಮಾಡಿದ ಅಧಿಕಾರಿಗೇ ತೆರವು ಉಸ್ತುವಾರಿ..!
ಬೆಂಗಳೂರು; ಕೆಲ ದಿನಗಳಿಂದ ರಾಜ್ಯ ಸರ್ಕಾರ ತುಂಬಾ ಆಸಕ್ತಿ ವಹಿಸಿ ಬೆಂಗಳೂರು ನಗರದಲ್ಲಿ ರಾಜಕಾಲುವೆ ಒತ್ತುವರೆ ತೆರವು ಕಾರ್ಯಾಚರಣೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ, ಇದು ಬಡವರ ಮನೆ ಒಡೆಯಲು ಮಾತ್ರ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಯಾಕಂದ್ರೆ, ಯಾರು ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ ಕಟ್ಟಿದ್ದಾರೋ ಅವರಿಗೇ ರಾಜಕಾಲುವೆ ಒತ್ತುವರಿ ತೆರವು ಮಾಡುವುದಕ್ಕೆ ಉಸ್ತುವಾರಿ ನೀಡಲಾಗಿದೆ.
ಕಾಂಗ್ರೆಸ್ ಸರ್ಕಾರದಲ್ಲಿ ಪೋಸ್ಟಿಂಗ್ ದಂದೆ ನಡೆಯುತ್ತಿದೆ ಎಂದು ಇತ್ತೀಚೆಗೆ ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಇದೀಗ ಇದಕ್ಕೆ ಪುಷ್ಠಿ ಸಿಕ್ಕಿದೆ. ಯಾಕಂದ್ರೆ, ರಾಜ್ಯ ಸರ್ಕಾರ, ಬಿಬಿಎಂಪಿ ಪ್ರಧಾನ ಅಭಿಯಂತರರಾದ ಬಿ.ಎಸ್.ಪ್ರಸಾದ್ ಅವರನ್ನು ಬೃಹತ್ ನೀರುಗಾಲುವೆ ಶಾಖೆಯ ನೇರ ಉಸ್ತುವಾರಿಗೆ ನಿಯೋಜಿಸಿದೆ. ಆದ್ರೆ ವಿಚಿತ್ರ ಅಂದ್ರೆ ಇದೇ ಬಿ.ಎಸ್.ಪ್ರಸಾದ್ ವಿರುದ್ಧವೇ ರಾಜಕಾಲುವೆ ಒತ್ತುವರಿ ಮಾಡಿರುವ ಆರೋಪವಿದೆ.
ಬಿಬಿಎಂಪಿ ಪ್ರಧಾನ ಅಭಿಯಂತರರಾದ ಬಿ.ಎಸ್.ಪ್ರಸಾದ್ ಅವರು ಆರ್‌ಟಿ ನಗರದ ವೇಣುಗೋಪಾಲ ಲೇಔಟ್‌ನಲ್ಲಿ ಮನೆಯೊಂದರನ್ನು ನಿರ್ಮಾಣ ಮಾಡಿದ್ದಾರೆ. ಈ ಮನೆಯಲ್ಲಿ ರಾಜಕಾಲುವೆ ಮೇಲೆಯೇ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪವಿದೆ. ಹೀಗಿರುವಾಗಲೇ ಇವರಿಗೇ ರಾಜಕಾಲುವೆ ಒತ್ತುವರಿ ತೆರವು ಮಾಡುವ ಉಸ್ತುವಾರಿ ನೀಡಲಾಗಿದೆ. ಹೀಗಾಗಿ, ಪಾಲಿಕೆ ಎಂಜಿನಿಯರ್‌ಗಳು ಕೇವಲ ಬಡವರ ಮನೆಗಳನ್ನು ಕೆಡವುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ರಾಜ್ಯ ಸರ್ಕಾರ ಬಡವರಿಗೊಂದು ನೀತಿ, ಉಳ್ಳವರಿಗೊಂದು ನೀತಿ ಯಾಕೆ ಅನುಸರಿಸುತ್ತಿದೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.