ಬಿಜೆಪಿಯವರೇ ಅಕ್ಕಿ ಬದಲು ಹಣ ಕೊಡಿ ಎಂದಿದ್ದರು; ಸಚಿವ ಹೆಚ್.ಕೆ.ಪಾಟೀಲ್
ಬೆಂಗಳೂರು; ಕಾಂಗ್ರೆಸ್ ಸರ್ಕಾರ ಅಕ್ಕಿ ಬದಲು ಹಣ ಕೊಟ್ಟು ಡೋಂಗಿ ರಾಜಕಾರಣ ಮಾಡುತ್ತಿದೆ ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿರುಗೇಟು ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತಣಾಡಿದ ಅವರು, ಬಿಜೆಪಿಯವರೇ ಅಕ್ಕಿ ಬದಲಾಗಿ ಹಣ ಕೊಡಿ ಎಂದು ಹೇಳಿದ್ದರು. ಅವರೇ ಡೋಂಗಿ ರಾಜಕಾರಣ ಮಾಡುತ್ತಿರೋದು ಎಂದು ಕಿಡಿಕಾರಿದ್ದಾರೆ.
ಬಿಜೆಪಿಯವರು ಹತ್ತು ಕೆಜಿ ಅಕ್ಕಿ ಕೊಟ್ಟರೆ ಅದನ್ನು ಜನ ಮಾರಿಕೊಳ್ಳುತ್ತಾರೆ ಎಂದು ಹೇಳುತ್ತಿದ್ದರು. ಈಗ ನೋಡಿದರೆ ಬೇರೆಯದನ್ನೇ ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿ ಪೂರೈಸೋದಿಲ್ಲ ಎಂದು ಹೇಳಿದೆ. ಹೀಗಾಗಿ ಅಕ್ಕಿ ವ್ಯವಸ್ಥೆ ಆಗುವವರೆಗೂ ಹಣ ಕೊಡಲು ತೀರ್ಮಾನ ಮಾಡಿದ್ದೇವೆ. ಬಿಜೆಪಿಯ ಕೆಲ ನಾಯಕರು ಅಕ್ಕಿ ಬದಲು ಹಣ ಕೊಡಿ ಎಂದು ಆಗ್ರಹ ಮಾಡಿದ್ದರು. ನಾವು ಈಗ ಹಣ ಕೊಡಲು ತೀರ್ಮಾನಿಸಿದರೆ ಅದನ್ನು ವಿರೋಧಿಸಲು ಹೊರಟಿದ್ದಾರೆ. ಡೋಂಗಿತನ ಬಿಜೆಪಿಯವರದ್ದೇ ಅಲ್ಲವೇ ಎಂದು ಸಚಿವ ಎಚ್.ಕೆ.ಪಾಟೀಲ್ ಪ್ರಶ್ನೆ ಮಾಡಿದ್ದಾರೆ.
ಜನಕ್ಕೆ ಹಣ ಕೊಟ್ಟರೆ ಅವರಿಗೆ ಏನು ಬೇಕೋ ಅದನ್ನು ತೆಗೆದುಕೊಳ್ಳುತ್ತಾರೆ. ಕೆಲವು ಕಡೆ ಅಕ್ಕಿ ಬಳಸೋದಿಲ್ಲ. ಜೋಳ ತಿನ್ನುತ್ತಾರೆ. ಅಂತಹವರು ಜೋಳ ಖರೀದಿ ಮಾಡೋದಕ್ಕೆ ಈ ಹಣ ಸಹಾಯಕವಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.