CrimeInternational

ಮಹಿಳಾ ಜೈಲಿನಲ್ಲಿ ಘರ್ಷಣೆ; 41 ಕೈದಿಗಳು ದಾರುಣ ಸಾವು!

ಹೊಂಡುರಾಸ್‌ನ ಮಹಿಳಾ ಜೈಲಿನಲ್ಲಿ ಮಂಗಳವಾರ ನಡೆದ ಘರ್ಷಣೆಯಲ್ಲಿ ಕನಿಷ್ಠ 41 ಜನರು ಸಾವನ್ನಪ್ಪಿದ್ದಾರೆ. ಗ್ಯಾಂಗ್‌ಗಳ ನಡುವೆ ಹೊಡೆದಾಟ ನಡೆದಿದ್ದು, ಇದೇ ವೇಳೆ ಕೈದಿಗಳ ಗುಂಪೊಂದು  ಜೈಲು ಕೋಣೆಗೆ ಬೆಂಕಿ ಹಚ್ಚಿದೆ.

ಹೆಚ್ಚಿನ ಕೈದಿಗಳು ಬೆಂಕಿಯಲ್ಲಿ ಬೆಂದುಹೋಗಿದ್ದಾರೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕೆಲವರನ್ನು ಕೊಲ್ಲಲಾಗಿದೆ. ಈ ಹಿನ್ನೆಲೆಯಲ್ಲಿ ಉಪ ಭದ್ರತಾ ಸಚಿವ ಜೂಲಿಸ್ಸಾ ವಿಲ್ಲನ್ಯೂವಾ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಪರಿಸ್ಥಿತಿಯನ್ನು ಹತ್ತಿಕ್ಕುವುದಾಗಿ ಭರವಸೆ ನೀಡಿದ್ದಾರೆ.

ಅಗ್ನಿಶಾಮಕ ದಳ, ಪೊಲೀಸರು ಮತ್ತು ಸೇನಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. “ಮಾನವ ಜೀವನದ ನಷ್ಟವನ್ನು ಸಹಿಸಲಾಗುವುದಿಲ್ಲ” ಎಂದು ವಿಲ್ಲನ್ಯೂವಾ ಹೇಳಿದರು. ಜೈಲು ಸಂಪೂರ್ಣವಾಗಿ ನಾಶವಾಗಿದೆ ಎಂದು ಕೈದಿಗಳ ಸಂಬಂಧಿಯೊಬ್ಬರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳಲ್ಲಿ ಜೈಲು ಪ್ರದೇಶ ಭಾರೀ ಹೊಗೆಯಿಂದ ತುಂಬಿರುವುದು ಕಂಡು ಬಂದಿದೆ. ಜೈಲಿನಲ್ಲಿ ಮಹಿಳೆಯರ ಸಾವು ಅತ್ಯಂತ ನೋವಿನ ಸಂಗತಿ ಎಂದು ದೇಶದ ಅಧ್ಯಕ್ಷ ಕ್ಸಿಯೋಮಾರಾ ಕ್ಯಾಸ್ಟ್ರೋ ಹೇಳಿದ್ದಾರೆ.

Share Post