BengaluruHealthLifestyle

ಪ್ರಪಂಚದಲ್ಲಿರೋ ಸೊಳ್ಳೆಗಳನ್ನೆಲ್ಲಾ ಸಾಯಿಸಿಬಿಟ್ಟರೆ ಏನಾಗುತ್ತೆ..?; ಸೊಳ್ಳೆ ಇಲ್ಲದಿದ್ದರೆ ಇಷ್ಟೆಲ್ಲಾ ಸಮಸ್ಯೆಯಾ..?

ಬೆಂಗಳೂರು; ರಾತ್ರಿ ವೇಳೆ ಸೊಳ್ಳೆಗಳ ಕಾಟಕ್ಕೆ ತುತ್ತಾಗದವರು ಈ ಭೂಮಿ ಮೇಲೆ ಯಾರೂ ಇಲ್ಲವೇನೋ. ಸೊಳ್ಳೆಗಳು ಗುಯ್‌ಗುಟ್ಟವು ಅಂದ್ರೆ ನಿದ್ದೆ ಮಾಯವಾದಂತೆಯೇ ಲೆಕ್ಕ. ಈ ಸೊಳ್ಳೆಗಳು ಬಹುತೇಕ ಎಲ್ಲಾ ಪ್ರಾಂತ್ಯಗಳಲ್ಲೂ ಇರುತ್ತವೆ. ಇವು ನಮಗೆ ಕಚ್ಚುವುದರಿಂದ ಸಾಮಾನ್ಯ ಜ್ವರದಿಂದ ಹಿಡಿದು ಮಾರಣಾಂತಿಕ ಕಾಯಿಲೆಗಳು ಕೂಡಾ ವಕ್ಕರಿಸುತ್ತವೆ. ನಿಮಗೆ ಆಶ್ಚರ್ಯವಾಗಬಹುದು. ಪ್ರಪಂಚದಾದ್ಯಂತ 3500ಕ್ಕೂ ಹೆಚ್ಚು ಪ್ರಬೇಧಗಳ ಸೊಳ್ಳೆಗಳಿವೆ. ಇದರಲ್ಲಿ ಬಹುತೇಕ ಪ್ರಬೇದಗಳ ಸೊಳ್ಳೆಗಳು ಮನುಷ್ಯನನ್ನು ಕಚ್ಚುವುದಿಲ್ಲ. ಬಹುತೇಕ ಸೊಳ್ಳೆಗಳು ಹಣ್ಣುಗಳು, ಎಲೆಗಳ ರಸಗಳನ್ನು ಹೀರಿ ಬದುಕುತ್ತವೆ. ಕೇವಲ ಆರು ಪ್ರಬೇಧಗಳ ಸೊಳ್ಳೆಗಳು ಮಾತ್ರ ಮನುಷ್ಯನ ರಕ್ತ ಹೀರುತ್ತವೆ. ಇವು ಹಲವಾರು ರೋಗಗಳನ್ನು ಹರಡುತ್ತವೆ ಕೂಡಾ.

ನೀವು ನಂಬ್ತೀರೋ ಇಲ್ವೋ ನಮ್ಮ ಭಾರತದಲ್ಲಿ ಸೊಳ್ಳೆಗಳಿಂದ ಕಾಯಿಲೆಗಳು ಹರಡಿ ಸಾಯುವವರ ಸಂಖ್ಯೆ ಹೆಚ್ಚಿದೆ. ಭಾರತದಲ್ಲಿ ಪ್ರತಿ ವರ್ಷ ಸೊಳ್ಳೆಗಳ ಕಾರಣದಿಂದ ಹತ್ತು ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ ಅಂತ ವರದಿಗಳು ಹೇಳುತ್ತವೆ. ಸೊಳ್ಳೆಗಳು ಕಚ್ಚುವುದರಿಂದ ಮಲೇರಿಯಾ, ಡೆಂಗ್ಯೂ, ಎಲ್ಲೋ ಫೀವರ್‌ ಮುಂತಾದ ಕಾಯಿಲೆಗಳು ಬರುತ್ತವೆ. ಈ ಕಾಯಿಲೆಗಳಿಂದ ಪ್ರತಿ ವರ್ಷ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಸೊಳ್ಳೆಗಳಿಂದ ಇಷ್ಟೆಲ್ಲಾ ಅನಾಹುತ ಆಗುತ್ತಿದೆ ಅಲ್ವಾ..? ಹೀಗಾಗಿ ಸೊಳ್ಳೆಗಳನ್ನೆಲ್ಲಾ ಸಾಯಿಸಿಬಿಟ್ಟರೆ ಹೇಗೆ..? ಸೊಳ್ಳೆಗಳ ಸಂತತಿಯನ್ನೇ ಇಲ್ಲದಂತೆ ಮಾಡಿದರೆ ಹೇಗೆ..? ಅನ್ನೋ ಆಲೋಚನೆ ಸಂಶೋಧಕರಿಗೆ ಬಂದಿತ್ತು. ಆದ್ರೆ ಹಲವು ಕಾರಣಗಳಿಗಾಗಿ ಹೀಗೆ ಮಾಡುವುದನ್ನು ಕಾರ್ಯರೂಪಕ್ಕೆ ತರಲಾಗುತ್ತಿಲ್ಲ.

ಮನುಷ್ಯನನ್ನು ಕಚ್ಚುವ ಆರು ಜಾತಿಗಳಲ್ಲಿ ಹೆಣ್ಣು ಸೊಳ್ಳೆಗಳು ಮಾತ್ರವೇ ಮನುಷ್ಯನ ರಕ್ತ ಹೀರುತ್ತವೆ. ಇವುಗಳನ್ನು ಗುರುತಿಸಿದ ಸಂಶೋಧಕರು, ಈ ಹೆಣ್ಣು ಸೊಳ್ಳೆಗಳ ಜೀನ್‌ನಲ್ಲಿ ಬದಲಾವಣೆ ತಂದು ಜೆನೆಟಿಕಲಿ ಮಾಡಿಫೈ ಮಾಡಿದ ಸೊಳ್ಳೆಗಳನ್ನು ಸಿದ್ಧಪಡಿಸಿದರು. ಈ ಸೊಳ್ಳೆಗಳು ಮೊಟ್ಟೆ ಇಡುತ್ತವೆ. ಆದ್ರೆ, ಆ ಮೊಟ್ಟೆಗಳಿಂದ ಮರಿಸೊಳ್ಳೆಗಳು ಹೊರಬರುವ ಮೊದಲೇ ತಾಯಿ ಸೊಳ್ಳೆ ಸಾವನ್ನಪ್ಪುತ್ತದೆ. ಪ್ರಯೋಗದ ಭಾಗವಾಗಿ ಸಂಶೋಧಕರು, ಮೂರು ಲಕ್ಷದಷ್ಟು ಈ ಜೆನೆಟಿಕಲಿ ಮಾಡಿಫೈಡ್‌ ಸೊಳ್ಳೆಗಳನ್ನು ಕೆಮನ್‌ ದ್ವೀಪದಲ್ಲಿ ಬಿಟ್ಟಿದ್ದರು. ಇದರಿಂದಾಗಿ ಈ ಕೆಮನ್‌ ದ್ವೀಪದಲ್ಲಿ ಸೊಳ್ಳೆಗಳ ಸಂಖ್ಯೆ ಶೇ.೯೬ರಷ್ಟು ಕಡಿಮೆಯಾಗಿತ್ತು. ಬ್ರೆಜಿಲ್‌ನಲ್ಲೂ ಇಂತಹ ಪ್ರಯೋಗ ನಡೆದಿತ್ತು.

ಸಂಶೋಧಕರು ಹೇಳೋ ಪ್ರಕಾರ ಮೂರು ಪ್ರಬೇಧಗಳ ಸೊಳ್ಳೆಗಳನ್ನು ನಾಶ ಮಾಡಿದರೆ ಪ್ರತಿ ವರ್ಷ ಹತ್ತು ಲಕ್ಷ ಮಂದಿಯ ಪ್ರಾಣಗಳನ್ನು ಉಳಿಸಿಕೊಳ್ಳಬಹುದು. ಇನ್ನು ಈ ಜೆನಿಟಕಲಿ ಮಾಡಿಫೈಡ್‌ ಸೊಳ್ಳೆಗಳ ಪ್ರಯೋಗದಿಂದ ಇಲ್ಲಿಯವರೆಗೆ ಯಾವುದೇ ರೀತಿಯ ದುಷ್ಪರಿಣಾಮಗಳೂ ಬೀರಲಿಲ್ಲ. ಆದ್ರೆ ಈ ಸೊಳ್ಳೆಗಳನ್ನು ಪೂರ್ತಿ ನಾಶ ಮಾಡಿದರೆ ಪ್ರಕೃತಿ ನೀಡಿರುವ ಫುಡ್‌ ಚೈನ್‌ಗೆ ನಾವು ಹಾನಿ ಮಾಡಿದಂತಾಗುತ್ತದೆ. ಪ್ರಕೃತಿಯಲ್ಲಿ ಆಹಾರಕ್ಕಾಗಿ ಎಲ್ಲಾ ಪ್ರಾಣಿಗಳೂ ಒಂದನ್ನೊಂದು ಆಶ್ರಯಿಸಿವೆ. ಅದೇ ರೀತಿ ಸೊಳ್ಳೆಗಳು ಹೂವುಗಳಲ್ಲಿ ಪರಾಗಸ್ಪರ್ಶಕ್ಕೆ ಸಹಾಯ ಮಾಡುತ್ತವೆ. ಈ ಕಾರಣದಿಂದ ಹೂವುಗಳು ಹಣ್ಣುಗಳಾಗುತ್ತವೆ. ಇನ್ನು ಇದೇ ಸೊಳ್ಳೆಗಳು ಕೆಲ ಪ್ರಾಣಿಗಳಿಗೆ ಆಹಾರ ಕೂಡಾ. ಕಪ್ಪೆ, ಹಲ್ಲಿ ಮುಂತಾದ ಪ್ರಾಣಿಗಳಿಗೆ ಸೊಳ್ಳೆಗಳೂ ಕೂಡಾ ಆಹಾರ. ಈ ಪ್ರಾಣಿಗಳು ಇರುವುದರಿಂದ ಪ್ರಕೃತಿಯ ಸಮತೋಲನಕ್ಕೆ ಯಾವುದೇ ತೊಂದರೆಯಾಗುತ್ತಿಲ್ಲ. ಹೀಗಾಗಿಯೇ ಸೊಳ್ಳೆಗಳನ್ನು ಸಂಪೂರ್ಣವಾಗಿ ನಾಶ ಮಾಡುವುದು ಸರಿಯಾದ ಕ್ರಮವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Share Post