ಚಿಕ್ಕಬಳ್ಳಾಪುರದಲ್ಲಿ ನೈತಿಕ ಪೊಲೀಸ್ಗಿರಿ; ಆರೋಪಿಗಳಿಗೆ ನ್ಯಾಯಾಂಗ ಬಂಧನ
ಚಿಕ್ಕಬಳ್ಳಾಪುರ; ಅನ್ಯಧರ್ಮದ ಸಹಪಾಠಿ ಜೊತೆ ಹೋಟೆಲ್ಗೆ ಹೋಗಿದ್ದಕ್ಕೆ ಚಿಕ್ಕಬಳ್ಳಾಪುರದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿತ್ತು. ಹಿಂದೂ ಯುವಕನ ಜೊತೆ ಮುಸ್ಲಿಂ ಹುಡುಗಿ ಇದ್ದುದನ್ನು ನೋಡಿದ ಮುಸ್ಲಿಂ ಹುಡುಗರು ಅವರ ಮೇಲೆ ದಾಳಿ ಮಾಡಿದ್ದರು. ಇದೀಗ ಪ್ರಕರಣಕ್ಕೆ ಕಾರಣ ಲೇಡಿಸ್ ಟೈಲರ್ ಎಂದು ಹೇಳಲಾಗುತ್ತಿದೆ. ಒಎಂಬಿ ರಸ್ತೆಯ ಲೇಡಿಸ್ ಟೈಲರ್ ಒಬ್ಬ, ಯುವಕ-ಯುವತಿಯ ಬಗ್ಗೆ ವಾಟ್ಸಾಪ್ ಗ್ರೂಪ್ನಲ್ಲಿ ಸುದ್ದಿ ಹರಡುತ್ತಿದ್ದನಂತೆ. ಜೊತೆಗೆ ಈ ಇಬ್ಬರ ವಿಡಿಯೋ ಹಾಗೂ ಫೋಟೋ ತೆಗೆದು ಗ್ರೂಪ್ನಲ್ಲಿ ಹಂಚಿಕೊಂಡಿದ್ದನಂತೆ.
ಹಿಂದೂ ಯುವಕನ ಜೊತೆ ಮುಸ್ಲಿಂ ಯುವತಿ ಹೋಗೋದು ತಪ್ಪು ಎಂಬಂತೆ ಬಿಂಬಿಸಿದ್ದನಂತೆ. ಇದೇ ಕಾರಣಕ್ಕೆ ಒಂದಷ್ಟು ಯುವಕರು ಮುಸ್ಲಿಂ ಯುವತಿ ಹಾಗೂ ಹಿಂದೂ ಯುವಕನ ಮೇಲೆ ಎರಡು ದಿನದ ಹಿಂದೆ ದಾಳಿ ಮಾಡಿದ್ದರು. ಇದೀಗ ಈ ಪ್ರಕರಣ ಸಂಬಂಧ ಯುವತಿ ಹೇಳಿಕೆ ಕೊಟ್ಟಿದ್ದಾಳೆ. ಆತ ನನ್ನ ಸಹಪಾಠಿ. ನಾನು ಆತನ ಜೊತೆ ತಿಂಡಿ ತಿನ್ನಲು ಹೋಗಿದ್ದೆ ಅಷ್ಟೆ. ನಮ್ಮ ನಡುವೆ ಯಾವುದೇ ಪ್ರೀತಿ ಇಲ್ಲ ಎಂದು ಹೇಳಿದ್ದಾಳೆ. ವಿನಾಕರಣ ನನ್ನ ಮೇಲೆ ಅಪವಾದ ಹೊರಿಸಿ ರಸ್ತೆಯಲ್ಲಿ ನನ್ನನ್ನು ಎಳೆದಾಡಿದ್ದಾರೆ. ಸಾಲದೆಂಬಂತೆ ಮನೆ ಬಳಿ ಬಂದು ಕೂಡಾ ಗಲಾಟೆ ಮಾಡಿದ್ದಾರೆ ಎಂದು ಯುವತಿ ಆರೋಪ ಮಾಡಿದ್ದಾಳೆ.
ಇನ್ನು ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ವಾಯಿದ್ ಹಾಗೂ ಸದ್ದಾಂ ಎಂಬುವವರನ್ನು ಬಂಧಿಸಲಾಗಿದೆ. ನ್ಯಾಯಾಧೀಶರು, ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.