ಗೆಲ್ಲದೇ ಇದ್ದರೆ ಇವರ ರಾಜಕೀಯ ಜೀವನ ಮಸುಕು; ಏನಾಗುತ್ತೆ ಇವರ ಭವಿಷ್ಯ..?
ಬೆಂಗಳೂರು; ನಾಳೆಯೇ ಮತದಾನ. ಇನ್ನೂ ಮತದಾರರ ಓಲೈಕೆ ನಡೆಯುತ್ತಿದೆ. ಎಲ್ಲಾ ಪಕ್ಷಗಳೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಇದರ ನಡುವೆ ಹಲವು ನಾಯಕರಿಗೆ ಸೋತರೆ ನಮ್ಮ ರಾಜಕೀಯ ಭವಿಷ್ಯವೇ ಕತ್ತಲಾಗುತ್ತದೆ ಎಂಬ ಭೀತಿ ಇದೆ. ಈ ಕಾರಣಕ್ಕಾಗಿ ರಾಜ್ಯದ ಕೆಲವು ಕ್ಷೇತ್ರ ತೀವ್ರ ಕುತೂಹಲಕ್ಕೆ ಕಾರಣವಾಗಿವೆ.
ಜಗದೀಶ್ ಶೆಟ್ಟರ್;
ಜಗದೀಶ್ ಶೆಟ್ಟರ್ ಮೂರು ದಶಕಕ್ಕೂ ಹೆಚ್ಚು ಕಾಲ ಬಿಜೆಪಿಯಲ್ಲಿದ್ದವರು. ಬಿಜೆಪಿ ಪಕ್ಷ ಅವರಿಗೆ ಸಿಎಂ ಸ್ಥಾನ ಸೇರಿ ಹಲವು ಉನ್ನತ ಹುದ್ದೆಗಳನ್ನು ನೀಡಿತ್ತು. ಆದ್ರೆ ಈ ಬಾರಿ ಅವರಿಗೆ ಟಿಕೆಟ್ ನಿರಾಕರಿಸಿತು. ಈ ಹಿನ್ನೆಲೆಯಲ್ಲಿ ಅವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಶೆಟ್ಟರ್ ಅವರನ್ನು ಸೋಲಿಸಿಯೇ ತೀರುತ್ತೇನೆ ಎಂದು ಬಿಎಸ್‌ವೈ ಶಪಥ ಮಾಡಿದ್ದಾರೆ. ಈ ಕಾರಣಕ್ಕಾಗಿ ಈ ಕ್ಷೇತ್ರ ಕುತೂಹಲಕ್ಕೆ ಕಾರಣವಾಗಿದೆ. ಅದ್ರಲ್ಲೂ ಶೆಟ್ಟರ್ ಈ ಬಾರಿ ಗೆಲ್ಲದೇ ಹೋದರೆ ಅವರು ರಾಜಕೀಯವಾಗಿ ಮೂಲೆಗುಂಪಾಗೋದು ಸಹಜ. ಅವರು ಗೆದ್ದರೆ ಮುಂದಿನ ಚುನಾವಣೆಗಳಲ್ಲಿ ಅವರ ಕುಟುಂಬದವರನ್ನು ರಾಜಕೀಯಕ್ಕೆ ತರಬಹುದು. ಇಲ್ಲದೆ ಹೋದರೆ, ವಿಜಯ ಸಂಕೇಶ್ವರ್ ಬಿಜೆಪಿಯಿಂದ ಹೊಸ ಪಕ್ಷ ಕಟ್ಟಿ ನಂತರ ರಾಜಕೀಯವಾಗಿ ಮೂಲೆಗುಂಪಾದ ರೀತಿಯಲ್ಲೇ ಜಗದೀಶ್ ಶೆಟ್ಟರ್ ಅವರಿಗೂ ಆಗಬಹುದು.
ವಿ.ಸೋಮಣ್ಣ;
ವಿ.ಸೋಮಣ್ಣ ಅವರು ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದವರು. ಅದೇ ಕ್ಷೇತ್ರದಿಂದ ತಮ್ಮ ಮಗನಿಗೆ ಟಿಕೆಟ್ ಕೇಳಿದ್ದರು. ಆದ್ರೆ ಹೈಕಮಾಂಡ್ ಅಚ್ಚರಿ ಎಂಬಂತೆ ಸೋಮಣ್ಣ ಅವರಿಗೆ ಚಾಮರಾಜನಗರ ಹಾಗೂ ವರುಣಾ ಎರಡು ಕ್ಷೇತ್ರಗಳನ್ನು ನೀಡಿದೆ. ಎರಡೂ ಕ್ಷೇತ್ರಗಳೂ ಸೋಮಣ್ಣ ಅವರಿಗೆ ಹೊಸವು. ಹೀಗಾಗಿ ಅವರಿಗೆ ದೊಡ್ಡ ಸವಾಲಿದು. ಒಂದು ವೇಳೆ ಸೋಮಣ್ಣ ಏನಾದರೂ ಎರಡೂ ಕ್ಷೇತ್ರದಲ್ಲಿ ಸೋತರೆ ರಾಜಕೀಯವಾಗಿ ಸೋಮಣ್ಣ ಮೂಲೆಗುಂಪಾಗೋದು ಸಹಜ. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಆದ್ದರಿಂದ ಸೋಮಣ್ಣ ಅವರಿಗೆ ಅಲ್ಲಿ ಗೆಲ್ಲೋದು ಕಷ್ಟವೇ ಇದೆ. ಇನ್ನು ಚಾಮರಾಜನಗರದಲ್ಲೂ ಸಾಕಷ್ಟು ಶ್ರಮವಹಿಸಬೇಕಿದೆ. ಸದ್ಯ ಪ್ರಚಾರ ಮುಗಿದಿದೆ. ಸೋಮಣ್ಣ ಅವರ ಭವಿಷ್ಯ ಏನಾಗುತ್ತೋ ನೋಡಬೇಕು.
ಜನಾರ್ದನರೆಡ್ಡಿ;
2008ರಲ್ಲಿ ರಾಜ್ಯದಲ್ಲಿ ಹಾಗೂ ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರಿಕ್ಕೆ ಬರೋದಕ್ಕೆ ಕಾರಣರಾದವರಲ್ಲಿ ಮಾಜಿ ಸಚಿವ ಜನಾರ್ದನರೆಡ್ಡಿ ಕೂಡಾ ಒಬ್ಬರು. ಅವರನ್ನು ಬಂಧಿಸಿದ ಮೇಲೆ ಜನಾರ್ದನರೆಡ್ಡಿಯನ್ನು ಬಿಜೆಪಿ ಪಕ್ಷ ಉಚ್ಚಾಟನೆ ಮಾಡಿತ್ತು. ಅನಂತರ ಅವರನ್ನು ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳಲೇ ಇಲ್ಲ. ಇದರಿಂದ ಬೇಸತ್ತು ಜನಾರ್ದರೆಡ್ಡಿ ಈ ಬಾರಿ ಸ್ವಂತ ಪಕ್ಷ ಕಟ್ಟಿದ್ದಾರೆ. ಅದರ ಹೆಸರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ. ಜನಾರ್ದನರೆಡ್ಡಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ. ಪತ್ನಿ ಅರುಣಾ ಅವರನ್ನು ಬಳ್ಳಾರಿಯಲ್ಲಿ ಸಹೋದರ ಸೋಮಶೇಖರರೆಡ್ಡಿ ವಿರುದ್ಧವೇ ಕಣಕ್ಕಿಳಿಸಿದ್ದಾರೆ. ದೊಡ್ಡ ಕನಸು ಹೊತ್ತುಕೊಂಡೇ ಜನಾರ್ದನರೆಡ್ಡಿ ರಾಜಕೀಯ ಪಕ್ಷ ಕಟ್ಟಿದರು. ಆದ್ರೆ ಅದಕ್ಕೆ ಅಷ್ಟೊಂದು ಬೆಂಬಲ ಸಿಗಲಿಲ್ಲ. ಸ್ನೇಹಿತ ಶ್ರೀರಾಮುಲು ಹಾಗೂ ಇಬ್ಬರು ರೆಡ್ಡಿ ಸಹೋದರರು ಕೂಡಾ ಬೆಂಬಲಿಸಲಿಲ್ಲ. ಹೀಗಾಗಿ ಜನಾರ್ದನರೆಡ್ಡಿ ಏನಾದರೂ ಸ್ವತಹ ಸೋತರೆ ಅವರ ರಾಜಕೀಯ ಭವಿಷ್ಯ ಬಹುತೇಕ ಮೂಲೆಗುಂಪಾಗುತ್ತದೆ.
ಲಕ್ಷ್ಮಣ ಸವದಿ;
ಲಕ್ಷ್ಮಣ ಸವದಿ ಕೂಡಾ ಬಿಜೆಪಿಯಿಂದ ಹೊರಬಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅಥಣಿ ಕ್ಷೇತ್ರದಿಂದ ಅವರು ಕಣದಲ್ಲಿದ್ದಾರೆ. ಇವರನ್ನು ಕೂಡಾ ಸೋಲಿಸೋದಕ್ಕೆ ಬಿಎಸ್ ಯಡಿಯೂರಪ್ಪ ಪಣ ತೊಟ್ಟಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಸವದಿ, ಪರಿಷತ್ ಸ್ಥಾನದ ಅವದಿ ಇನ್ನೂ ನಾಲ್ಕು ವರ್ಷ ಇದ್ದರೂ ರಾಜೀನಾಮೆ ಕೊಟ್ಟು ಕಾಂಗ್ರೆಸ್‌ಗೆ ಬಂದಿದ್ದಾರೆ. ಇಲ್ಲೇನಾದರೂ ಸೋತರೆ ಅವರ ರಾಜಕೀಯ ಭವಿಷ್ಯ ಕಷ್ಟಕರವಾಗಿರುತ್ತದೆ.
ವೈಎಸ್‌ವಿ ದತ್ತಾ
ಕಡೂರು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ವೈಎಸ್‌ವಿ ದತ್ತಾ ದೇವೇಗೌಡರ ಮಾನಸಪುತ್ರ ಎಂದೇ ಹೆಸರಾದವರು. ಆದ್ರೆ ಅವರು ಕುಮಾರಸ್ವಾಮಿಯವರ ಜೊತೆಗಿನ ವೈಮನಸ್ಯದಿಂದ ಕಾಂಗ್ರೆಸ್ ಸೇರಿದ್ದರು. ಆದ್ರೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗಲಿಲ್ಲ. ಕೊನೆಗೆ ದೇವೇಗೌಡರೇ ದತ್ತಾರನ್ನು ಕರೆದು ಟಿಕೆಟ್ ಕೊಟ್ಟಿದ್ದಾರೆ. ಈಗ ಮತ್ತೆ ಅವರು ಜೆಡಿಎಸ್ ಅಭ್ಯರ್ಥಿ. ಹೀಗೆ ಪಕ್ಷ ಬದಲಿಸಿದ್ದರಿಂದ ಅಲ್ಲಿ ರಾಜಕೀಯ ಗೊಂದಲ ಇದೆ. ಜೊತೆಗೆ ದತ್ತಾ ಬಳಿ ಹಣವೂ ಇಲ್ಲ. ಹೀಗಾಗಿ ಈ ಚುನಾವಣೆ ದತ್ತಾ ಅವರ ರಾಜಕೀಯ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ. ದತ್ತಾ ಅವರಿಗೆ ಈ ಚುನಾವಣೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
ಎಂಟಿಬಿ ನಾಗರಾಜ್
ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್‌ಗೆ ಒಳ್ಳೆ ಹೆಸರಿದೆ. ಆದ್ರೆ, ಕಳೆದ ಉಪಚುನಾವಣೆಯಲ್ಲಿ ಅವರು ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಈಗ ಶರತ್ ಬಚ್ಚೇಗೌಡ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದಾರೆ. ಶರತ್ ಹಾಲಿ ಶಾಸಕ ಕೂಡಾ. ಎಂಟಿಬಿ ನಾಗರಾಜ್ ಅವರು ತಮ್ಮ ಪುತ್ರನಿಗೆ ಟಿಕೆಟ್ ಕೇಳಿದ್ದರು. ಆದ್ರೆ ಬಿಜೆಪಿ ಹೈಕಮಾಂಡ್ ಎಂಟಿಬಿ ಅವರಿಗೇ ಟಿಕೆಟ್ ನೀಡಿದೆ. ಹೀಗಾಗಿ, ಎಂಟಿಬಿ ನಾಗರಾಜ್ ಈ ಬಾರಿ ಏನಾದರೂ ಸೋತರೆ ಅವರ ರಾಜಕೀಯ ಭವಿಷ್ಯ ಮಸುಕಾಗಲಿದೆ. ಶರತ್ ಬಚ್ಚೇಗೌಡ ಈ ಕ್ಷೇತ್ರದಲ್ಲಿ ಮತ್ತಷ್ಟು ಬಲಶಾಲಿಯಾಗಲಿದ್ದಾರೆ.