ದೇಶದಲ್ಲಿ ಮತ್ತೆ ಕೊರೋನಾ ಭೀತಿ ; ಅಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಭೆ
ನವದೆಹಲಿ: ದೇಶದಲ್ಲಿ ಮತ್ತೆ ಕೊರೋನಾ ಹೆಚ್ಚಳವಾಗುತ್ತಿದೆ. ಹೀಗಾಗಿ ಕೊರೋನಾ ನಿಯಂತ್ರಣ ಹಾಗೂ ಲಸಿಕೆ ವಿತರಣೆ ಸಂಬಂಧ ಮಾಹಿತಿ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಅಧಿಕಾರಿಗಳೊಂದಿಗೆ ವರ್ಚುಯಲ್ ಮೀಟಿಂಗ್ ಮಾಡುತ್ತಿರುವ ಪ್ರಧಾನಿ ಮೋದಿ, ದೇಶದ ಸದ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಸಭೆಯಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೂಬಾ, ಪ್ರಧಾನಮಂತ್ರಿ ಮುಖ್ಯ ಕಾರ್ಯದರ್ಶಿ ಪಿ.ಕೆ.ಮಿಶ್ರಾ, ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್, ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್ ಭಾಗವಹಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಹೊಸ ರೂಪಾಂತರಿ ಕೊರೋನಾ ತಳಿ ಕಾಣಿಸಿಕೊಂಡಿದೆ. ಇದು ಪ್ರಪಂಚಕ್ಕೆ ಭೀತಿ ಹುಟ್ಟಿಸಿದೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ ಕೂಡಾ ತುರ್ತು ಸಭೆ ನಡೆಸಿ, ಮುನ್ನೆಚ್ಚರಿಕೆಗಳ ಬಗ್ಗೆ ಚರ್ಚೆ ನಡೆಸಿದೆ. ಈ ಬೆನ್ನಲ್ಲೇ ಭಾರತ ಸರ್ಕಾರ ಕೂಡಾ ಎಚ್ಚೆತ್ತುಕೊಂಡಿದೆ. ಹೊರ ದೇಶಗಳಿಂದ ಬರುವವರ ಮೇಲೆ ಹದ್ದಿಗಣ್ಣಿಡು ತೀರ್ಮಾನಿಸಲಾಗಿದೆ.
ದೇಶದಲ್ಲಿ ಕೊರೋನಾ ಲಸಿಕೆ ವಿತರಣೆ ಪ್ರಕ್ರಿಯೆ ಆರಂಭವಾಗಿ 9 ತಿಂಗಳಲ್ಲೇ 100 ಕೋಟಿ ಡೋಸ್ ವಿತರಿಸಲಾಗಿದೆ. ಈ ಮೂಲಕ ಜಗತ್ತಿನಲ್ಲಿ 100 ಕೋಟಿ ಡೋಸ್ ನೀಡಿದ ಎರಡನೇ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದೆ.
ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳು ನಂತರ ಸ್ಥಾನಗಳಲ್ಲಿವೆ.