BengaluruHealthNational

ಕೊರೋನಾ ಹೊಸ ತಳಿ ಭೀತಿ ; ರಾಜ್ಯದಲ್ಲಿ ಕಟ್ಟೆಚ್ಚರ

ಬೆಂಗಳೂರು: ದಕ್ಷಿಣ ಆಫ್ರಿಕಾದಲ್ಲಿ B.1.1529 ಹೆಸರಿನ ಹೊಸ ರೂಪಾಂತರಿ ಕೊರೋನಾ ತಳಿ ಪ್ರಪಂಚದಾದ್ಯಂತ ಭೀತಿ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದೆ. ಈ ಸಂಬಂಧ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ 6 ಪ್ರಕರಣಗಳು ಹಾಗೂ ಹಾಂಗ್‌ಕಾಂಗ್‌ನಲ್ಲಿ 1 ಪ್ರಕರಣ ಪತ್ತೆಯಾಗಿವೆ. ಈ ಹೊಸ ರೂಪಾಂತರಿ ತಳಿಯಿಂದ ಕಂಟಕ ಎದುರಾಗಲಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಡಬ್ಲ್ಯುಹೆಚ್‌ಒ ನಿನ್ನೆ ತುರ್ತು ಸಭೆ ನಡೆಸಿ ಚರ್ಚಿಸಿತ್ತು. ಇದೀಗ ಭಾರತ ಕೂಡಾ ದಕ್ಷಿಣ ಆಫ್ರಿಕಾ ತಳಿ ಬಗ್ಗೆ ಮುನ್ನೆಚ್ಚರಿಕೆ ವಹಿಸಿದೆ. ಕರ್ನಾಟಕದಲ್ಲೂ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಕಣ್ಗಾವಲು ಹೆಚ್ಚಿಸಲಾಗಿದೆ.

 ಪ್ರಯಾಣಿಕರು ಮತ್ತು ಅವರ ಸಂಪರ್ಕಗಳ ಸ್ಕ್ರೀನಿಂಗ್ ಮತ್ತು ಪರೀಕ್ಷೆ, ವಾಡಿಕೆಯ ಸೆಂಟಿನೆಲ್ ಕಣ್ಗಾವಲು, ಗೊತ್ತುಪಡಿಸಿದ INSACOG ಜೀನೋಮಿಕ್ ಸೀಕ್ವೆನ್ಸಿಂಗ್ ಪ್ರಯೋಗಾಲಯಗಳಿಗೆ RT-PCR ಪಾಸಿಟಿವ್ ಮಾದರಿಗಳನ್ನು ಕಳುಹಿಸಲು ತೀರ್ಮಾನಿಸಲಾಗಿದೆ.  ರಾಜ್ಯದ ಅಲ್ಲಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಕೊರೋನಾ ಆತಂಕ ಶುರುವಾಗಿದೆ. ಹೀಗಾಗಿ, ಆರೋಗ್ಯ ಇಲಾಖೆ, ತಾಂತ್ರಿಕ ಸಲಹಾ ಸಮಿತಿ ರಾಜ್ಯದಲ್ಲಿ ಸೋಂಕು ವ್ಯಾಪಕವಾಗಿ ಹರಡದಂತೆ ಕ್ರಮ ಕೈಗೊಳ್ಳಲು ಮುಂದಾಗಿವೆ.

ಕೋವಿಡ್ ಪರೀಕ್ಷಾ ವಿಧಾನವನ್ನು ಬದಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಸೋಂಕಿತರಿಂದ ಪಡೆದ ಸ್ಯಾಂಪಲ್ ನ್ನು ತೆಗೆದುಕೊಂಡು ಅದು ಡೆಲ್ಟಾ ರೂಪಾಂತರಿಯೇ ಅಥವಾ ಹೊಸ ರೂಪಾಂತರಿಯೇ ಎಂದು ಪರೀಕ್ಷಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಆರೋಗ್ಯ ಇಲಾಖೆ ಆಯುಕ್ತ ಡಿ,.ರಂದೀಪ್, ಕೋವಿಡ್ ಕ್ಲಸ್ಟರ್ ಸಾಮಾನ್ಯವಾಗಿದೆ. ರಾಜ್ಯದಲ್ಲಿ ಇಂತಹ ಏಳು ಕ್ಲಸ್ಟರ್ ಗಳಿವೆ. ಆದರೆ ಈ ಕ್ಲಸ್ಟರ್ ಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿ ಬಗ್ಗೆ ಮತ್ತೆ ಆತಂಕವುಂಟುಮಾಡಿದೆ.

Share Post