BengaluruDistrictsPolitics

ಮೈಸೂರಲ್ಲೇ ಇದ್ದರೂ ಮನೆಗೆ ಹೋಗದ ಸಿದ್ದರಾಮಯ್ಯ; ಹೋಟೆಲ್‌ನಲ್ಲೇ ಕುಳಿತು ಮಾಜಿ ಸಿಎಂ ರಣತಂತ್ರ

ಮೈಸೂರು; ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕ್ಷೇತ್ರ ಹುಡಕಾಟ ನಡೆಸಿ ಕೊನೆಗೆ ಸ್ವಕ್ಷೇತ್ರ ವರುಣಾವನ್ನೇ ಆಯ್ಕೆ ಮಾಡಿಕೊಂಡರು. ವರುಣಾ ಗೆಲ್ಲೋದಕ್ಕೆ ಸುಲಭವಾಗುತ್ತೆ ಅನ್ನೋದು ಕಾರಣಕ್ಕೆ ಸಿದ್ದರಾಮಯ್ಯ ವರುಣಾದಲ್ಲಿ ಸ್ಪರ್ಧೆ ಮಾಡಿದ್ದಾರೆ. ಆದ್ರೆ ಬಿಜೆಪಿ ತಂತ್ರಗಾರಿಕೆ ನಡೆಸಿ ಇಲ್ಲಿ ಸಚಿವ ವಿ.ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ. ಈ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಹೆಚ್ಚಿವೆ. ಲಿಂಗಾಯತರೆಲ್ಲರೂ ಸೋಮಣ್ಣಗೆ ಮತ ಹಾಕಿದರೆ ಸಿದ್ದರಾಮಯ್ಯಗೆ ಕಷ್ಟವಾಗುತ್ತದೆ. ಈ ಕಾರಣಕ್ಕಾಗಿ ಸಿದ್ದರಾಮಯ್ಯ ವಿರುದ್ಧ ವಿ.ಸೋಮಣ್ಣ ಕಣದಲ್ಲಿದ್ದಾರೆ. ಹೀಗಾಗಿ, ಸುಲಭವಾಗಿ ಗೆಲ್ಲುತ್ತೇನೆ ಎಂದುಕೊಂಡಿದ್ದ ಸಿದ್ದರಾಮಯ್ಯ ಅವರಿಗೆ ಕೊಂಚ ಅಳುಕಿದ್ದಂತೆ ಕಾಣುತ್ತಿದೆ. ಹೀಗಾಗಿ ಅವರು ಮೂರು ದಿನಗಳಿಂದ ಮೈಸೂರಿನಲ್ಲೇ ಇದ್ದು ತಂತ್ರಗಾರಿಕೆ ಮಾಡುತ್ತಿದ್ದಾರೆ.

ಮೊದಲಿಗೆ ನಾನು ಒಂದು ದಿನ ಮಾತ್ರ ವರುಣಾದಲ್ಲಿ ಪ್ರಚಾರ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದ್ರೆ ವಿ.ಸೋಮಣ್ಣ ಅಭ್ಯರ್ಥಿಯಾಗಿದ್ದರಿಂದ ಸಿದ್ದರಾಮಯ್ಯ ಅವರು ಸ್ಟಾರ್‌ಗಳನ್ನು ಕರೆತಂದು ಪ್ರಚಾರ ಮಾಡಿದರು. ಸತತ ಮೂರು ದಿನ ರೋಡ್‌ ಶೋಗಳನ್ನು ನಡೆಸಿದರು. ಇದೀಗ ಸಿದ್ದರಾಮಯ್ಯ ಅವರು ಮೂರು ದಿನದಿಂದ ಮೈಸೂರಿನಲ್ಲೇ ಉಳಿದಿದ್ದಾರೆ. ಆದರೂ ಅವರು ಮೈಸೂರಿನಲ್ಲೇ ಇರುವ ತಮ್ಮ ಸ್ವಂತ ಮನೆಗೆ ತೆರಳಿಲ್ಲ. ಬದಲಾಗಿ ಖಾಸಗಿ ಹೋಟೆಲ್‌ ಒಂದರಲ್ಲಿ ಉಳಿದುಕೊಂಡಿದ್ದಾರೆ. ಅಲ್ಲಿಂದಲೇ ಗೆಲ್ಲೋದಕ್ಕಾಗಿ ತಂತ್ರಗಾರಿಕೆ ನಡೆಸುತ್ತಿದ್ದಾರೆ.

ಬಿ.ಎಲ್‌.ಸಂತೋಷ್‌, ಅಮಿತ್‌ ಶಾ ಮುಂತಾದ ನಾಯಕರು ಸೋಮಣ್ಣ ಅವರ ಗೆಲುವಿಗಾಗಿ ತಂತ್ರಗಾರಿಕೆ ನಡೆಸಿದ್ದಾರೆ. ಬಿಜೆಪಿ ಸಂಘಟನೆಗಾಗಿ ವರುಣಾ ಕ್ಷೇತ್ರದಲ್ಲಿ ಸಾಕಷ್ಟು ಶ್ರಮಿಸಲಾಗಿದೆ. ಹೀಗಾಗಿ ಎಡವಟ್ಟಾದರೆ ಕಷ್ಟ ಎಂದು ಸಿದ್ದರಾಮಯ್ಯ, ವರುಣಾ ಮೇಲೆ ನಿಗಾ ಇಟ್ಟಿದ್ದಾರೆ. ಹೋಟೆಲ್‌ನಲ್ಲಿ ಕೂತು ಬೂತ್‌ ಮಟ್ಟದ ಕಾರ್ಯಕರ್ತರನ್ನು ಕರೆಸಿಕೊಂಡು ಸಮಾಲೋಚನೆ ನಡೆಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆದ ತಪ್ಪುಗಳು ಇಲ್ಲಿ ಆಗದಂತೆ ನೋಡಿಕೊಳ್ಳುತ್ತಿದ್ದಾರೆ.

Share Post