ಇಂದು ಬಹಿರಂಗ ಪ್ರಚಾರ ಅಂತ್ಯ; ಇಂದಿನಿಂದ ಮದ್ಯವೂ ಸಿಗೋದಿಲ್ಲ..
ಬೆಂಗಳೂರು; ಕರ್ನಾಟಕ ವಿಧಾನಸಭಾ ಚುನಾವಣೆ ಕೊನೆಯ ಘಟ್ಟಕ್ಕೆ ಬಂದಿದೆ. ಇಂದು ಸಂಜೆ ಆರು ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ನಾಳೆಯಿಂದ ಮನೆ ಮನೆ ಪ್ರಚಾರಕ್ಕಷ್ಟೇ ಅವಕಾಶವಿದೆ. ಇನ್ನು ಹೊರಗಿನಿಂದ ಬಂದವರು ಎಲ್ಲರೂ ಕ್ಷೇತ್ರಗಳನ್ನು ತೊರೆಯಬೇಕಾಗುತ್ತದೆ. ಆ ಕ್ಷೇತ್ರಕ್ಕೆ ಸಂಬಂಧಪಟ್ಟವರು ಮಾತ್ರ ಕ್ಷೇತ್ರದಲ್ಲಿರಬೇಕಾಗುತ್ತದೆ. ಬುಧವಾರ ಬೆಳಗ್ಗೆ ಆರು ಗಂಟೆಯಿಂದ ಸಂಜೆ ಏಳು ಗಂಟೆವರೆಗೂ ಮತದಾನ ನಡೆಯಲಿದ್ದು, ಇದಕ್ಕಾಗಿ ಅಧಿಕಾರಿಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಇಂದು ಸಂಜೆಯೊಳಗೆ ರೋಡ್ ಶೋ, ಬಹಿರಂಗ ಸಭೆಗಳನ್ನು ಮುಗಿಸಬೇಕು. ಅನಂತರ ಯಾರೂ ಬಹಿರಂಗ ಪ್ರಚಾರ ಮಾಡುವಂತಿಲ್ಲ. ಇನ್ನು ಚುನಾವಣೆ ಹಿನ್ನೆಲೆಯಲ್ಲಿ ಇಂದು ಸಂಜೆ ಐದು ಗಂಟೆಯಿಂದ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಸಂಜೆ ಐದು ಗಂಟೆಗೆ ಮದ್ಯದಂಗಡಿಗಳನ್ನು ಬಂದ್ ಮಾಡಲಾಗುತ್ತದೆ. ಮೇ ಹತ್ತರ ಮಧ್ಯರಾತ್ರಿವರೆಗೂ ಮದ್ಯ ಮಾರಾಟ ಇರೋದಿಲ್ಲ. ಇನ್ನು ಮೇ ೧೩ರಂದು ಮತಎಣಿಕೆ ನಡೆಯಲಿದ್ದು, ಅಂದು ಕೂಡಾ ಮದ್ಯ ಮಾರಾಟ ಇರುವುದಿಲ್ಲ.