ಕೊನೆಗೂ ರತ್ನಾ ಮಾಮನಿ ನಾಮಪತ್ರ ಅಂಗೀಕಾರ; ಬಿಜೆಪಿ ಅಭ್ಯರ್ಥಿಗೆ ರಿಲೀಫ್
ಬೆಳಗಾವಿ; ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ನಾಮಪತ್ರ ತಿರಸ್ಕೃತವಾಗುವ ಭೀತಿ ಎದುರಿಸುತ್ತಿದ್ದ ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿಗೆ ಬಿಗ್ ರಿಲೀಫ್ ಸಿಕ್ಕಿದೆ. ನಾಮಪತ್ರ ಸಮರ್ಪಕವಾಗಿ ಸಲ್ಲಿಕೆ ಮಾಡಿಲ್ಲ. ಹೀಗಾಗಿ ರತ್ನಾ ಅವರ ನಾಮಪತ್ರ ತಿರಸ್ಕಾರ ಮಾಡಬೇಕೆಂದು ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಗಳು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆ ನಡೆಸಿದ ಚುನಾವಣಾಧಿಕಾರಿಗಳು, ರತ್ನಾ ಮಾಮನಿ ನಾಮಪತ್ರವನ್ನು ಅಂಗೀಕಾರ ಮಾಡಿದ್ದಾರೆ. ರತ್ನಾ ಪರ ವಕೀಲರ ವಾದ ಆಲಿಸಿದ ನಂತರ ಚುನಾವಣಾಧಿಕಾರಿಗಳು ನಾಮಪತ್ರ ಕ್ರಮಬದ್ಧವಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅಫಿಡವಿಟ್ ಸಲ್ಲಿಕೆ ವೇಳೆ ನಿಯಮ ಪಾಲಿಸಿಲ್ಲ ಎಂದು ಆರೋಪಿಸಲಾಗಿತ್ತು. ರತ್ನಾ ಅವರು ಏಪ್ರಿಲ್ 18 ಹಾಗೂ ಏಪ್ರಿಲ್ 19ರಂದು ಎರಡು ಬಾರಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದ್ರೆ ಅವರು ಪ್ರಜಾಪ್ರತಿನಿಧಿ ಕಾಯ್ದೆ 2019ರ ತಿದ್ದುಪಡಿ ಪ್ರಕಾರ ಪರಿಷ್ಕೃತ ಫಾರ್ಮ್ ಸಂಖ್ಯೆ 26 (ಅಫಿಡೆವಿಟ್) ಸಲ್ಲಿಸಿಲ್ಲ. ದಬಲಾಗಿ ಎರಡೂ ಬಾರಿಯೂ, 2018ರ ಮಾದರಿಯ ಫಾರ್ಮ್ ಸಂಖ್ಯೆ 26ನ್ನು ಸಲ್ಲಿಸಿದ್ದರು ಎಂದು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಆರೋಪ ಮಾಡಿದ್ದರು. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದರು.