ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬೆಂಗಳೂರು; ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ಈ ಕಾರಣಕ್ಕಾಗಿ ನನ್ನ ಸಹೋದರನಿಂದಲೂ ನಾಮಪತ್ರ ಸಲ್ಲಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ನಾಮಪತ್ರವನ್ನು ಸಮರ್ಪಕವಾಗಿ ಸಲ್ಲಿಸಿದ್ದೇನೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದಾರೆ.
ಕನಕಪುರದಲ್ಲಿ ಯಾರು ಸ್ಪರ್ಧೆಯಲ್ಲಿ ಉಳಿಯುತ್ತಾರೆ ಎಂಬುದಕ್ಕೆ ಕಾಲವೇ ಉತ್ತರ ನೀಡುತ್ತೆ. ನನ್ನ ವಿರುದ್ಧ ಷಡ್ಯಂತ್ರ, ಕುತಂತ್ರ ಎಲ್ಲವೂ ನಡೆಯುತ್ತಿದೆ. ಬಿಜೆಪಿ ನಾಯಕರು ಏನು ಬೇಕಾದರೂ ಮಾಡಿಕೊಳ್ಳಲಿ. ಯಾರ ಅನುಕಂಪವೂ ನನಗೆ ಬೇಕಾಗಿಲ್ಲ ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ಹೇಳಿದರು.
ನಾನು ಕನಕಪುರದಲ್ಲಿ ನಾಮಪತ್ರ ಸಲ್ಲಿಸುವಾಗ ನೀಡಿರುವ ಎಲ್ಲಾ ದಾಖಲೆಗಳು ಸರಿಯಾಗಿವೆ, ಹಾಗೂ ಸಮರ್ಪಕವಾಗಿವೆ. ಐಟಿ, ಇಡಿ ಹಾಗೂ ಲೋಕಾಯುಕ್ತಕ್ಕೆ ಸಲ್ಲಿಸಿರುವ ಅಫಿವಿಡವಿಟ್‌ಗಳ ಆಧಾರದ ಮೇಲೆಯೇ ನಾನು ದಾಖಲೆಗಳನ್ನು ನೀಡಿದ್ದೇನೆ. ನನ್ನ ನಾಮಪತ್ರ ಸ್ವೀಕಾರವಾಗುವ ಭರವಸೆ ನನಗಿದೆ. ಆದ್ರೂ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಈ ಕಾರಣಕ್ಕಾಗಿ ನನ್ನ ಸಹೋದರ ಡಿ.ಕೆ.ಸುರೇಶ್ ಕೂಡಾ ನಾಮಪತ್ರ ಸಲ್ಲಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.