DistrictsPolitics

ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ; ರೋಡ್‌ ಶೋ ಮೂಲಕ ಬಲ ಪ್ರದರ್ಶನ

ವರುಣಾ; ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ವರುಣಾ ಕ್ಷೇತ್ರದಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಅದಕ್ಕೂ ಮೊದಲು ಗೋಳೂರು ಗ್ರಾಮದ ಸರ್ಕಲ್‌ ನಲ್ಲಿ ಬೃಹತ್‌ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನನ್ನನ್ನು 1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿಕೊಡಿ ಎಂದು ಮತದಾರರಿಗೆ ಮನವಿ ಮಾಡಿದರು.

ಹಿಂದಿನ ಚುನಾವಣೆಗಳಲ್ಲೂ ನನ್ನನ್ನು ಹೆಚ್ಚು ಅಂತರದಿಂದ ಗೆಲ್ಲಿಸಿದ್ದೀರಿ. ಈ ಚುನಾವಣೆಯಲ್ಲೂ ಭಾರೀ ಅಂತರದಿಂದ ಗೆಲ್ಲಿಸಿಕೊಡಿ. ನಾನು ಮೂರು ದಿನ ಮಾತ್ರ ಇಲ್ಲಿ ಪ್ರಚಾರ ಮಾಡುತ್ತೇನೆ. ಉಳಿದ ಸಮಯದಲ್ಲಿ ರಾಜ್ಯಾದ್ಯಂತ ಪ್ರಚಾರಕ್ಕೆ ಹೋಗುತ್ತೇನೆ ಎಂದು ಹೇಳಿದರು. ಇದೇ ವೇಳೆ ಸಿದ್ದರಾಮಯ್ಯ ಅವರು ತಮ್ಮ ಮೊಮ್ಮಗ ಧವನ್‌ ರಾಕೇಶ್‌ ಅವರನ್ನು ಪರಿಚಯಿಸಿದರು. ಇದು ನನ್ನ ಕೊನೆಯ ಚುನಾವಣೆ. ನನ್ನ ಬಳಿಕ ಯತೀಂದ್ರ ಹಾಗೂ ಧವನ್‌ ಇರುತ್ತಾರೆ ಎಂದರು ಸಿದ್ದರಾಮಯ್ಯ ಹೇಳಿದ್ದಾರೆ.  ಧವನ್‌ ರಾಕೇಶ್‌ಗೆ ಈಗ 18 ವರ್ಷ. ಚುನಾವಣೆಗೆ ಬರಬೇಕಾದರೆ 25 ವರ್ಷ ಬೇಕು. ವಿದ್ಯಾಭ್ಯಾಸ ಮುಗಿದ ಮೇಲೆ ಧವನ್‌ ರಾಜಕೀಯಕ್ಕೆ ಬರುತ್ತಾನೆ. ರಾಕೇಶ್‌ ಹೆಚ್ಚು ಜನಪ್ರಿಯನಾಗಿದ್ದ. ಅವನ ಮೇಲಿನ ಪ್ರೀತಿಯಿಂದಲೇ ನೀವು ಇವತ್ತು ಇಷ್ಟು ಪ್ರೀತಿ ತೋರಿಸುತ್ತಿದ್ದೀರಿ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಪುತ್ರ ರಾಕೇಶ್‌ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದರು. ಸಿದ್ದರಾಮಯ್ಯ ಅವರು ರಾಕೇಶ್‌ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದೇ ನಂಬಿದ್ದರು. ಆದ್ರೆ ರಾಕೇಶ್‌ ಅಕಾಲಿಕ ಮರಣವಾಯ್ತು. ಇದೀಗ ಅವರ ಮಗ ಧವನ್‌ ರಾಕೇಶ್‌ ರಾಜಕೀಯದ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರು ಮೊಮ್ಮಗನನ್ನು ಪ್ರಚಾರಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ.

Share Post