BengaluruPolitics

ಕಾಂಗ್ರೆಸ್‌ ಸೇರಿದ ಎನ್‌.ವೈ.ಗೋಪಾಲಕೃಷ್ಣ; ಕಾಂಗ್ರೆಸ್‌ ಅಧಿಕಾರಕ್ಕೆ ಬರೋದು ನಿಶ್ಚಿತ ಎಂದ ಡಿಕೆಶಿ

ಬೆಂಗಳೂರು; ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಬಿಜೆಪಿ, ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರುವವರು ಜಾಸ್ತಿಯಾಗುತ್ತಿದ್ದಾರೆ. ಮೊನೆಯಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎನ್‌.ವೈ.ಗೋಪಾಲಕೃಷ್ಣ ಅವರು ಬಿಜೆಪಿ ತೊರೆದು ಇಂದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು, ಗೋಪಾಲಕೃಷ್ಣ ಅವರಿಗೆ ಪಕ್ಷದ ಬಾವುಟ ನೀಡುವ ಮೂಲಕ ಕಾಂಗ್ರೆಸ್‌ಗೆ ಬರಮಾಡಿಕೊಂಡರು.

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌,  ರಾಜ್ಯದ ಜನರ ಧ್ವನಿ ಕಾಂಗ್ರೆಸ್‌ ಕಡೆ ಇದೆ. ನಮ್ಮ ನಡೆ ಅಧಿಕಾರದ ಕಡೆ ಆಗ್ತಿದೆ ಅನ್ನೋದಕ್ಕೆ ಜನ ತೋರಿಸುತ್ತಿರುವ ಪ್ರೀತಿಯೇ ಉದಾಹರಣೆ.  ಬಿಜೆಪಿ ತೊರೆದು ಅನೇಕ ನಾಯಕರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಎನ್‌.ವೈ.ಗೋಪಾಲಕೃಷ್ಣ ಅವರು ಕೂಡಾ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದಾರೆ. ಶಿವಲಿಂಗೇಗೌಡರು ಕೂಡಾ ರಾಜೀನಾಮೆ ನೀಡಿದ್ದಾರೆ. ಶೀಘ್ರದಲ್ಲೇ ಅವರೂ ಕಾಂಗ್ರೆಸ್‌ ಸೇರಲಿದ್ದಾರೆ. ಸ್ವಯಂ ಪ್ರೇರಿತವಾಗಿ ಎಲ್ಲರೂ ನಮ್ಮ ಜೊತೆ ಸೇರುತ್ತಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,  ಎಂಎಲ್ಸಿಗಳಾದ ಪ್ರಕಾಶ್ ರಾಥೋಡ್, ದಿನೇಶ್ ಗೂಳಿಗೌಡ, ಮಾಜಿ ಮೇಯರ್ ಜೆ.ಹುಚ್ಚಪ್ಪ ಮತ್ತಿತರರು ಉಪಸ್ಥಿತರಿದ್ದರು.

Share Post