DistrictsPolitics

ಜೈಲಲ್ಲಿದ್ದರೂ, ಬೋನಿನಲ್ಲಿದ್ದರೂ ಹುಲಿ ಹುಲೀನೇ; ಮಾಜಿ ಸಚಿವ ಜನಾರ್ದನರೆಡ್ಡಿ

ಕೊಪ್ಪಳ; ಹುಲಿ ಜೈಲಿನಲ್ಲಿದ್ದರೂ ಹುಲೀನೇ, ಬೋನಿನಲ್ಲಿದ್ದರೂ ಹುಲೀನೇ ಎಂದು ಮಾಜಿ ಸಚಿವ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಹೇಳಿದ್ದಾರೆ. ಕೊಪ್ಪಳ ಜಿಲ್ಲೆ ಕನಕಗಿರಿಯಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ಜೀವನ ಮುಗಿದುಹೋಯ್ತು ಎಂದು ಕೆಲವರು ಅಂದುಕೊಂಡಿದ್ದರು. ಆದ್ರೆ ನಾನು ಇಂದಿನಿಂದ ಬೇಟೆ ಆರಂಭಿಸಿದ್ದೇನೆ ಎಂದಿದ್ದಾರೆ.

ಇನ್ನು ಇದೇ ವೇಳೆ ಅವರು ಕನಕಗಿರಿ ಕ್ಷೇತ್ರದಿಂದ ಚಾರೂಲ್ ವೆಂಕಟರಮಣ ಅವರನ್ನು ಕಣಕ್ಕಿಳಿಸುವುದಾಗಿ ಘೋಷಣೆ ಮಾಡಿದ್ದಾರೆ. ನಾನು ಗಂಗಾವತಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ನನ್ನ ಈ ನಿರ್ಧಾರದಲ್ಲಿ ಯಾವ ಬದಲಾವಣೆಯೂ ಇಲ್ಲ ಎಂದು ಜನಾರ್ದನರೆಡ್ಡಿ ಇದೇ ವೇಳೆ ಸ್ಪಷ್ಟನೆ ಕೊಟ್ಟಿದ್ದಾರೆ. ಕನಕಗಿರಿಯ ಕನಕಾಚಲಪತಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಮಾತನಾಡಿದರು.

ಸದ್ಯ 10 ಕ್ಷೇತ್ರಗಳಿಗೆ ನಮ್ಮ ಪಕ್ಷ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇನೆ. ಇನ್ನೂ ಗೆಲ್ಲುವ 31 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಫೈನಲ್‌ ಮಾಡಲಾಗುತ್ತದೆ. ಬಳ್ಳಾರಿ ನಗರಲ್ಲಿ ಪತ್ನಿ ಅರುಣಾ ಲಕ್ಷ್ಮಿ ಸ್ಪರ್ಧಿಸಲಿದ್ದು, ಕೊಪ್ಪಳ, ಯಲಬುರ್ಗಾ ಮತ್ತು ಕುಷ್ಟಗಿಗೆ ಆದಷ್ಟು ಬೇಗನೆ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದು ಜನಾರ್ದನರೆಡ್ಡಿ ತಿಳಿಸಿದರು.

ಇನ್ನು ಜನಾರ್ದನರೆಡ್ಡಿ ಕೂಡಾ ಹಲವು ಉಚಿತ ಯೋಜನೆಗಳನ್ನು ಜಾರಿಗೆ ತರೋದಾಗಿ ಆಶ್ವಾಸನೆ ನೀಡಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ ಮಾಸಿಕ ಎರಡೂವರೆ ಸಾವಿರ ರೂಪಾಯಿ ನೀಡುತ್ತೇವೆ. ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಬಡ್ಡಿ ರಹಿತವಾಗಿ ಹತ್ತು ಲಕ್ಷ ರೂಪಾಯಿ ಸಾಲ ನೀಡುತ್ತೇವೆ. ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ.

Share Post