BengaluruCrime

ಲಂಚ ಪ್ರಕರಣ; ಪ್ರಶಾಂತ್‌ ಸೇರಿ ಐದು ಮಂದಿ ಬಂಧನ – ಬಿ.ಎಸ್‌.ಪಾಟೀಲ್‌

ಬೆಂಗಳೂರು; ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್ ಡಿಎಲ್) ಟೆಂಡರ್ ಕೊಡಿಸಲು ಎಂಬತ್ತು ಲಕ್ಷ ಲಂಚ ಕೇಳಿ ನಲವತ್ತು ಲಕ್ಷ ಮುಂಗಡ ಹಣ ಪಡೆದುಕೊಳ್ಳುತ್ತಿರುವಾಗ ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್‌ ಮಾಡಾಳ್‌ ಅವರನ್ನು ಬಲೆಗೆ ಬೀಳಿಸಲಾಗಿತ್ತು. ಈ ಸಂಬಂಧ ಲೋಕಾಯುಕ್ತ ಮುಖ್ಯ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್‌ ಅವರು ಮಾಹಿತಿ ನೀಡಿದ್ದಾರೆ. ಈ ಪ್ರಕರಣ ಸಂಬಂಧ ಒಟ್ಟು ಐದು ಮಂದಿಯನ್ನು ಬಂಧಿಸಿದ್ದೇವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಲಂಚ ಪಡೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ನಾವು ದಾಳಿ ನಡೆಸಿದೆವು. ಪ್ರಶಾಂತ್‌ ಅವರು ನವಲತ್ತು ಲಕ್ಷ ರೂಪಾಯಿ ಲಂಚ ಪಡೆಯುತ್ತಿರುವಾಗಲೇ ರೆಡ್‌ ಹ್ಯಾಂಡಾಗಿ ಸಿಕ್ಕರು. ಅವರ ಕಚೇರಿಯಲ್ಲಿ 2.2 ಕೋಟಿ ರೂಪಾಯಿ ನಗದು ಸಿಕ್ಕಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಇನ್ನು ಪ್ರಶಾಂತ್‌ ಮನೆಯಲ್ಲಿ 6.12 ಕೋಟಿ ರೂಪಾಯಿ ಸಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಶಾಂತ್‌ ಹಾಗೂ ಅವರ ಅಕೌಂಟೆಂಟ್‌ ಅವರನ್ನು ಬಂಧಿಸಲಾಗಿದೆ. ಜೊತೆಗೆ ಲಂಚ ನೀಡಲು ಬಂದಿದ್ದ ಮೂವರನ್ನು ಕೂಡಾ ಬಂಧಿಸಲಾಗಿದೆ. ಈ ಐವರನ್ನು ಪೊಲೀಸ್‌ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು. ಶಾಸಕರಾಗಲೀ, ಅಧಿಕಾರಿಗಳಾಗಲೀ ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮ ಆಗುತ್ತದೆ ಎಂದು ಲೋಕಾಯುಕ್ತ ಮುಖ್ಯ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್‌ ಹೇಳಿದ್ದಾರೆ.

Share Post