ಎಂಟನೇ ತರಗತಿಗೇ ಓದು ಬಿಟ್ಟ ಇಂದೋರ್ ಯುವಕ ಈಗ ಆಪಲ್ ಡಾಕ್ಟರ್..!
ಬೆಂಗಳೂರು; ಹರೀಶ್ ಅಗರ್ವಾಲ್… ಇಂದೋರ್ನಲ್ಲಿ ಬಡ ಕುಟುಂಬದಲ್ಲಿ ಜನಿಸಿದವರು.. ತಂದೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರ ಬಡತನ ಎಷ್ಟಿತ್ತೆಂದರೆ ಮಗನನ್ನು ಓದಿಸೋದಕ್ಕೂ ಸಾಧ್ಯವಿರಲಿಲ್ಲ. ಹೀಗಾಗಿ ಹರೀಶ್ ಅಗರ್ವಾಲ್ ಎಂಟನೇ ತರಗತಿಗೇ ಓದು ಬಿಟ್ಟರು. ಆದ್ರೆ ಇವರೀಗ ಆಪಲ್ ಡಾಕ್ಟರ್ ಆಗಿದ್ದಾರೆ. ಆಪಲ್ ಕಂಪನಿಯ ಯಾವುದೇ ಪ್ರಾಡಕ್ಟನ್ನು ಇವರು ಅಚ್ಚುಕಟ್ಟಾಗಿ ರಿಪೇರಿ ಮಾಡುತ್ತಾರೆ.. ಆಪಲ್ ಪ್ರಾಡಕ್ಟ್ಗಳನ್ನು ಉತ್ತಮವಾಗಿ ರಿಪೇರಿ ಮಾಡುವ ದೇಶದ ಏಕೈಕ ವ್ಯಕ್ತಿ ಅಂದ್ರೆ ಹರೀಶ್ ಅಗರ್ವಾಲ್ ಎಂದರೆ ತಪ್ಪಾಗಲಿಕ್ಕಿಲ್ಲ.
ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಹರೀಶ್ ಅಗರ್ವಾಲ್ ಮೊದಲಿಗೆ ಹೋಟೆಲ್ ಮಾಣಿಯಾಗಿಯೂ ಕೆಲಸ ಮಾಡಿದ್ದಾರೆ. ಅನಂತರ ಅವರು ಸೋದರ ಸಂಬಂಧಿಯೊಬ್ಬರ ನೆರವಿನೊಂದಿಗೆ ಲ್ಯಾಪ್ಟಾಪ್ ಹಾಗೂ ಮೊಬೈಲ್ ರಿಪೇರಿ ಕೇಂದ್ರದಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಅಲ್ಲಿ ಕೆಲಸ ಕಲಿತ ಅವರಿಗೆ ಒಂದು ರಿಪೇರಿ ಮಾಡಲು ವ್ಯಕ್ತಿ ಆಪಲ್ ಮ್ಯಾಕ್ಬುಕ್ ಒಂದನ್ನು ತಂದುಕೊಡುತ್ತಾರೆ. ಅಲ್ಲಿಯವರೆಗೂ ಅವರಿಗೆ ಆಪಲ್ ಕಂಪನಿಯ ಪ್ರಾಡಕ್ಟ್ಗಳು ರಿಪೇರಿ ಮಾಡಲು ಗೊತ್ತಿರುವುದಿಲ್ಲ. ಆದರೂ ಆಪಲ್ ಮ್ಯಾಕ್ ಬುಕ್ ರಿಪೇರಿ ಮಾಡಿಕೊಡುತ್ತಾರೆ. ಅನಂತರ ಅವರು ಆಪಲ್ ಮೊಬೈಲ್, ಟ್ಯಾಬ್, ಲ್ಯಾಪ್ಟಾಪ್ಗಳನ್ನು ರಿಪೇರಿ ಮಾಡಲು ಮುಂದಾಗುತ್ತಾರೆ. ಅವುಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ಅನಂತರ ತಾವೇ ಒಂದು ಆಪಲ್ ರಿಪೇರಿ ಕೇಂದ್ರ ಆರಂಭಿಸುತ್ತಾರೆ.
ಬೆಂಗಳೂರಿನ ಕೋರಮಂಗಲದಲ್ಲಿ ಹರೀಶ್ ಅಗರ್ವಾಲ್ ಅವರು ಈ ರಿಪೇರಿ ಕೇಂದ್ರವನ್ನು ನಡೆಸುತ್ತಾರೆ. ವಾರ್ಷಿಕ ಅವರು 3 ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದ್ದಾರೆ. ಅವರ ಕಂಪನಿಯಲ್ಲಿ 18ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದಾರೆ. ಮೊದಲಿಗೆ ಎರಡು ಲಕ್ಷ ರೂಪಾಯಿ ಬಂಡವಾಳದೊಂದಿಗೆ ಆರಂಭಿಸಲಾದ ಈ ಕಂಪನಿ ಈಗ ದೊಡ್ಡದಾಗಿ ಬೆಳೆದು ನಿಂತಿದೆ. ಭಾರತದಾದ್ಯಂತ ಇವರಿಗೆ ಕಸ್ಟಮರ್ಗಳಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲೂ ಕರೀಸ್ ಅಗರ್ವಾಲ್ ತಮ್ಮ ಬ್ರಾಂಚ್ಗಳನ್ನು ಸ್ಥಾಪಿಸಲು ಮುಂದಾಗಿದ್ದಾರೆ.
ಆಪಲ್ ಕಂಪನಿ ಪ್ರಾಡಕ್ಟ್ಗಳನ್ನು ರಿಪೇರಿ ಮಾಡಲು ಮುಂದಾದಾಗ ಅವರಿಗೆ ಮೊದಲಿಗೆ ಸವಾಲು ಎದುರಾಯಿತು. ಅದರ ಬಿಡಿಭಾಗಗಳನ್ನು ಹುಡುಕುವುದೇ ಹರೀಶ್ ಅವರಿಗೆ ದೊಡ್ಡ ಸವಾಲಾಗಿತ್ತು. ಆದ್ರೆ ಎಲ್ಲಾ ಸವಾಲುಗಳನ್ನೂ ಅವರು ಮೆಟ್ಟಿ ನಿಂತರು.. ಬೇರೆ ಬೇರೆ ಕಡೆಯಿಂದ ಬಿಡಿಭಾಗಗಳನ್ನು ತರಿಸಿ ಅವರು ಯಶಸ್ವಿಯಾಗಿ ರಿಪೇರಿ ಮಾಡುತ್ತಿದ್ದಾರೆ. ಆಪಲ್ನ ಒರಿಜಿನಲ್ ಬಿಡಿಭಾಗಗಳನ್ನೇ ಅವರು ತರಿಸಿ ರಿಪೇರಿ ಮಾಡಿಕೊಡುತ್ತಾರೆ. ಹೀಗಾಗಿ ಕಸ್ಟಮರ್ಗಳು ಇವರ ಬಗ್ಗೆ ನಂಬಿಕೆ ಇರಿಸಿದ್ದಾರೆ.
ಮೊದಲಿಗೆ ಅವರು ಬೆಂಗಳೂರಿಗೆ ಬಂದಾಗ ಸಾಕಷ್ಟು ಸಂಕಷ್ಟ ಅನುಭವಿಸಿದರು. ಅವರಿಗೆ ಕನ್ನಡ ಬರುತ್ತಿರಲಿಲ್ಲ. ಇಂಗ್ಲೀಷ್ ಗೊತ್ತಿರಲಿಲ್ಲ. ಹಿಂದಿಯಲ್ಲೇ ವ್ಯವಹರಿಸಬೇಕಿತ್ತು. ಹೀಗಾಗಿ ಯಾರೂ ಕೆಲಸ ನೀಡುತ್ತಿರಲಿಲ್ಲ. ಜೊತೆ ವಿದ್ಯಾಭ್ಯಾಸವೂ ಇರಲಿಲ್ಲ. ಈ ಕಾರಣಕ್ಕಾಗಿ ಕೆಲಸ ಗಿಟ್ಟಿಸಿಕೊಳ್ಳಲು ಹರೀಶ್ ಅಗರ್ವಾಲ್ ಅವರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಆದ್ರೆ ಈಗ ಹರೀಶ್ ಅವರೇ ಹಲವಾರು ಮಂದಿಗೆ ಕೆಲಸ ಕೊಟ್ಟಿದ್ದಾರೆ. ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಇವರನ್ನು ಹುಡುಕಿಕೊಂಡು ಬರುವಂತೆ ಬೆಳೆದು ನಿಂತಿದ್ದಾರೆ.