ಮಾರ್ಚ್ 1ರಿಂದ ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ; ಯಾಕೆ ಗೊತ್ತಾ..?
ಶಿವಮೊಗ್ಗ; ಏಳನೇ ವೇತನ ಆಯೋಗ ಜಾರಿ ಸೇರಿದಂತೆ ಹಲವು ಬೇಡಿಕೆಗಳಿಗೆ ಬಜೆಟ್ನಲ್ಲಿ ಉತ್ತರ ಸಿಕ್ಕಿಲ್ಲ. ಈ ಕಾರಣದಿಂದಾಗಿ ರಾಜ್ಯ ಸರ್ಕಾರಿ ನೌಕರರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಮಾರ್ಚ್ 1 ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು ಮಾಹಿತಿ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯ ಎಲ್ಲಾ ಸರ್ಕಾರಿ ನೌಕರರು ಕೂಡಾ ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಬಜೆಟ್ ನಲ್ಲಿ ಯಾವುದೇ ಘೋಷಣೆ ಮಾಡದೆ ಸಿಎಂ ನಮಗೆ ಅನ್ಯಾಯ ಮಾಡಿದ್ದಾರೆ. ಇದ್ರಿಂದ ರಾಜ್ಯದ 9 ಲಕ್ಷ ಸರ್ಕಾರಿ ನೌಕರರಿಗೆ ಬೇಸರವಾಗಿದೆ. ಹೀಗಾಗಿ ಕೂಡಲೇ ಸರ್ಕಾರ ಏಳನೇ ವೇತನ ಆಯೋಗದ ಶಿಫಾರಸನ್ನು ಮಧ್ಯಂತ ಆದೇಶದ ಮೂಲಕ ಜಾರಿ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡಿಯೇ ತೀರುತ್ತೇವೆ ಎಂದು ಅವರು ಹೇಳಿದರು.