ಜೈಲಿನಲ್ಲಿ ತಪಾಸಣೆಗೆ ಹೆದರಿ ಮೊಬೈಲ್ ನುಂಗಿದ ಅಪರಾಧಿ
ಗೋಪಾಲಗಂಜ್; ಜೈಲುಗಳಲ್ಲಿ ಖೈದಿಗಳು ಅಕ್ರಮವಾಗಿ ಮೊಬೈಲ್ ಗಳನ್ನು ಬಳಸುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಜೈಲುಗಳಲ್ಲಿ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಆಗಾಗ ಮೊಬೈಲ್ ಮತ್ತಿತರ ವಸ್ತುಗಳು ಸಿಗುತ್ತಿರುತ್ತವೆ. ಅದೇ ರೀತಿ ಬಿಹಾರದ ಗೋಪಾಲ ಗಂಜ್ ಜಿಲ್ಲಾ ಕಾರಾಗೃಹದಲ್ಲಿ ತಪಾಸಣೆ ನಡೆದಿದ್ದು, ಈ ವೇಳೆ ಖೈದಿಯೊಬ್ಬ ಮೊಬೈಲ್ ಅನ್ನು ನುಂಗಿರುವ ಘಟನೆ ನಡೆದಿದೆ.
ಅಧಿಕಾರಿಗಳು ತಪಾಸಣೆ ಮಾಡುವಾಗ ಭಯದಿಂದ ಖೈದಿ ಕ್ವೈಷರ್ ಅಲಿ ಮೊಬೈಲ್ ನುಂಗಿಬಿಟ್ಟಿದ್ದಾನೆ. ಕೆಲ ದಿನದ ನಂತರ ಆತನಿಗೆ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ ವೇಳೆ ತಾನು ಮೊಬೈಲ್ ನುಂಗಿರುವುದಾಗಿ ಆತ ಬಾಯ್ಬಿಟ್ಟಿದ್ದಾನೆ. ಆಗ ಜೈಲು ಸಿಬ್ಬಂದಿ ಎಕ್ಸ್ ರೇ ಮಾಡಿಸಿದಾಗ ಹೊಟ್ಟೆಯಲ್ಲಿ ಮೊಬೈಲ್ ಇರುವುದು ಪತ್ತೆಯಾಗಿದೆ. ಪಾಟ್ನಾ ಮೆಡಿಕಲ್ ಕಾಲೇಜಿನಲ್ಲಿ ಆ ಮೊಬೈಲ್ನ್ನು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.