ಬಜೆಟ್ ಜಾತ್ರೆ ಕನ್ನಡಕದಂತೆ, ಹಾಕಿಕೊಂಡ್ರೆ ಏನೂ ಕಾಣಲ್ಲ; ಡಿ.ಕೆ.ಶಿವಕುಮಾರ್
ಬೆಂಗಳೂರು; ಬಿಜೆಪಿ ಸರ್ಕಾರ ಮಂಡಿಸಿರುವ ಬಜೆಟ್ ಜಾತ್ರೆ ಕನ್ನಡಕದಂತೆ, ಹಾಕಿಕೊಂಡ್ರೆ ಏನೂ ಕಾಣಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಬಜೆಟ್ ಮಂಡನೆ ಮುಕ್ತಾಯವಾದ ನಂತರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಧಮ್ಮಿದ್ದರೆ, ತಾಕತ್ತಿದ್ದರೆ ಎಂದು ಮಾತನಾಡುತ್ತಿದ್ದ ಸಿಎಂಗೆ ಬಜೆಟ್ ಓದುವಾಗ ಸ್ವರವೇ ಇರಲಿಲ್ಲ. ಸಣ್ಣ ಧ್ವನಿಯಲ್ಲಿ ಮಾತನಾಡುತ್ತಿದ್ದರು ಎಂದು ಹೇಳಿದ್ದಾರೆ.
ಈ ಬಜೆಟ್ ಕಿವಿಗೆ ಹೂ ಇಡುವ ಬಜೆಟ್. ಈ ಬಜೆಟ್ ಅಸ್ತಿತ್ವಕ್ಕೆ ಬರೋದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬಜೆಟ್ ಕೇವಲ ಆಶ್ವಾಸನೆಗಳ ಪಟ್ಟಿ ಅಷ್ಟೇ. ಇದು ಬಿಸಿಲು ಕುದುರೆ ಬಜೆಟ್. ಅದು ಯಾರ ಕೈಗೂ ಸಿಗೋದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಾನು ಈಗಾಗಲೇ ಗೃಹ ಲಕ್ಷ್ಮೀ ಯೋಜನೆ ಜಾರಿ ಮಾಡೋದಾಗಿ ಆಶ್ವಾಸನೆ ನೀಡಿದ್ದೇವೆ. ಅದನ್ನು ನೋಡಿ ಸರ್ಕಾರ ಮಹಿಳೆಯರಿಗೆ ತಿಂಗಳಿಗೆ ಕೇವಲ 500 ರೂಪಾಯಿ ನೀಡೋದಾಗಿ ಹೇಳಿದೆ. ಅವರು ನಮ್ಮನ್ನು ಕಾಪಿ ಮಾಡಿದ್ದಾರೆ. ಇದ್ರಿಂದ ಕಾಂಗ್ರೆಸ್ ಪ್ರಣಾಳಿಕೆಗೆ ಶಕ್ತಿ ಬಂದಿದೆ ಎಂದು ಹೇಳಿದ್ದಧಾರೆ.
ಇನ್ನು ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಮಾಡುವುದರ ಬಗ್ಗೆ ಮಾತನಾಡಿರುವ ಡಿ.ಕೆ.ಶಿವಕುಮಾರ್, ರಾಮನಗರದಲ್ಲಿ ಅವರ ಪಾರ್ಟಿ ಕಚೇರಿ ಕಟ್ಟಲಿ ಫಸ್ಟ್ ಎಂದು ಹೇಳಿದ್ದಾರೆ. ಇನ್ನು ಸರ್ಕಾರ ಜನರ ಕಿವಿಗೆ ಹೂ ಇಟ್ಟಿದೆ ಎಂದು ತೋರಿಸುವ ಸಲುವಾಗಿ ಡಿ.ಕೆ.ಶಿವಕುಮಾರ್ ಕಿವಿಗೆ ಹೂ ಇಟ್ಟುಕೊಂಡು ಬಂದು ಗಮನ ಸೆಳೆದರು.