BengaluruEconomyPolitics

ಒಬ್ಬ ಅಭ್ಯರ್ಥಿಯಿಂದ 30 ಕೋಟಿ, ಕ್ಷೇತ್ರವೊಂದಕ್ಕೆ 100 ಕೋಟಿ..!; ಚುನಾವಣೆಯಲ್ಲಿ ಹರಿಯೋ ಹಣದ ಹೊಳೆ ಎಷ್ಟು?

ಬೆಂಗಳೂರು; ನಿಜ ಹೇಳಬೇಕು ಅಂದ್ರೆ ರಾಜ್ಯದ ಜನತೆಗೆ ಈಗ ಸುಗ್ಗಿಕಾಲ… ಈಗ ಜನ ಏನು ಕನಸು ಕಂಡರೂ ಅದು ಬಹುತೇಕ ನೆರವೇರುತ್ತೆ… ಪ್ರವಾಸ ಹೋಗ್ಬೇಕು ಅಂದ್ರೆ ಅದು ಕೂಡಲೇ ಅರೇಂಜ್‌ ಆಗುತ್ತೆ… ದೇವಸ್ಥಾನ ಕಟ್ಟಬೇಕು, ಜಾತ್ರೆ ಮಾಡ್ಬೇಕು ಅಂದ್ರೆ ಅದಕ್ಕೆ ಬೇಕಾದ ಹಣ ಕ್ಷಣಾರ್ಧದಲ್ಲಿ ಅರೇಂಜ್‌ ಆಗುತ್ತೆ… ಸ್ವಲ್ಪ ಚಿನ್ನ ಸಿಕ್ಕಿದ್ದರೆ ಸಾಕಿತ್ತು ಅಂತ ಕನಸು ಕಂಡರೆ ಅದು ಬೆಳಗಾಗುವಷ್ಟರಲ್ಲಿ ನನಸಾಗಿಬಿಡುತ್ತೆ… ಮನೆಯಲ್ಲಿ ಕುಕ್ಕರ್‌, ಮಿಕ್ಸಿ, ಸ್ಟೌ ಕೆಟ್ಟಿದೆ ಅಂದ್ರೆ ಯೋಚ್ನೇನೇ ಮಾಡ್ಬೇಕಿಲ್ಲ… ರಿಪೇರಿ ಮಾಡಿಸೋ ಅವಶ್ಯಕತೆಯೂ ಇಲ್ಲ.. ಹೊಸ ವಸ್ತುಗಳೇ ನಮ್ಮ ಮನೆ ಬಾಗಿಲಲ್ಲಿರುತ್ತವೆ… ಜನರ ಕನಸು ಕಾಣಬೇಕು ಅಷ್ಟೇ… ಅದನ್ನು ನನಸು ಮಾಡಿಸೋಕೆ ನಾನು ಮುಂದು ತಾ ಮುಂದು ಅಂತ ಮುಂದೆ ಬರ್ತಾರೆ… ಯಾವ ಬ್ರಾಂಡ್‌ ಬೇಕು ಅದೇ ಬ್ರಾಂಡ್‌ ವಸ್ತು ನಿಮ್ಮ ಮನೆ ಸೇರಿರುತ್ತೆ… ಯಾಕಂದ್ರೆ ಈ ಮೂರು ತಿಂಗಳು ಮಾತ್ರನೇ ಮತದಾರು ಪ್ರಭುಗಳಾಗ್ತಾರೆ… ದೇವರಿಗೆ ಕಾಣಿಕೆ ಅರ್ಪಿಸೋ ರೀತಿ ರಾಜಕಾರಣಿಗಳು ಮತದಾರರಿಗೆ ಕಾಣಿಕೆಗಳನ್ನು ಅರ್ಪಿಸಿಕೊಳ್ತಾ ಇದ್ದಾರೆ…

ಹೇಳಿಕೇಳಿ ಜನವರಿ, ಫೆಬ್ರವರಿ ತಿಂಗಳಲ್ಲಿ ಅಯ್ಯಪ್ಪ ಹಾಗೂ ಓಂಶಕ್ತಿ ಮಾಲಾಧಾರಿಗಳು ವ್ರತಾಚರಣೆ ಮಾಡ್ತಾರೆ… ಅವ್ರು ಪ್ರತಿ ವರ್ಷ ತಮ್ಮ ಸ್ವಂತ ಖರ್ಚಿನಲ್ಲಿ ದೇವರ ದರ್ಶನ ಮಾಡಿಕೊಂಡು ಬರ್ತಾರೆ… ಆದ್ರೆ ಈ ಬಾರಿ ಹಾಗಾಗ್ತಿಲ್ಲ… ರಾಜಕಾರಣಿಗಳು ಬಸ್‌ ಮಾಡಿಸಿಕೊಟ್ಟು, ಖರ್ಚಿಗೆ ಹಣವನ್ನೂ ಕೊಟ್ಟು ಪ್ರವಾಸ ಮಾಡಿಸುತ್ತಿದ್ದಾರೆ… ಅಯ್ಯಪ್ಪ, ಓಂ ಶಕ್ತಿ ದೇಗುಲಕ್ಕಷ್ಟೇ ಅಲ್ಲ… ಮತದಾರರು ಕೇಳಿದ ಕಡೆಗೆ, ಹೇಳಿದಷ್ಟು ದಿನಗಳ ಕಾಲ ಓಡಾಡಿಸಿಕೊಂಡು ಬರುತ್ತಿದ್ದಾರೆ… ಪ್ರತಿ ಕ್ಷೇತ್ರದಲ್ಲೂ ಇದು ಸಾಮಾನ್ಯವಾಗ್ಬಿಟ್ಟಿದೆ… ಟ್ರಾವೆಲ್ಸ್‌ನವರಿಗೆ ಈಗ ಭರ್ಜರಿ ಬ್ಯುಸಿನೆಸ್‌… ಇದಕ್ಕಾಗಿ ರಾಜ್ಯದ್ಯಂತ ಸಾವಿರಾರು ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ… ಇನ್ನು ಕುಕ್ಕರ್‌, ಸ್ಟೌ, ಮಿಕ್ಸಿ ಮುಂತಾದ ಗೃಹೋಪಯೋಗಿ ವಸ್ತುಗಳು ಬೇಡ ಎಂದರೂ ಮನೆ ಸೇರುತ್ತಿವೆ.. ಚುನಾವಣೆಗೆ ಸ್ಪರ್ಧೆ ಮಾಡಬೇಕು ಅಂತಿರುವವರೆಲ್ಲಾ ಸಾವಿರಾರು ಗೃಹೋಪಯೋಗಿ ವಸ್ತುಗಳನ್ನು ಮನೆಮನೆಗೂ ಹಂಚುತ್ತಿದ್ದಾರೆ… ಅದೂ ಕೂಡಾ ಒಂದೇ ಪಕ್ಷದ ಇಬ್ಬರು ಮೂವರು ಆಕಾಂಕ್ಷಿಗಳು ಸ್ಪರ್ಧೆಗಿಳಿದು ಹಣ ಖರ್ಚು ಮಾಡುತ್ತಿದ್ದಾರೆ… ಒಂದು ಕ್ಷೇತ್ರದಲ್ಲಿ ಮೂರೂ ಪಕ್ಷಗಳಿಂದ ಸರಾಸರಿ ಐವರು ಆಕಾಂಕ್ಷಿಗಳು ಹಣ ಹೊಳೆ ಹರಿಸುತ್ತಿದ್ದಾರೆ… ಗುಂಡು ತುಂಡಿನ ಪಾರ್ಟಿಗಳು, ಜಾತ್ರೆಗಳು, ಆರ್ಕೆಸ್ಟ್ರಾ ಕಾರ್ಯಕ್ರಮಗಳು ಎಲ್ಲವೂ ಭರ್ಜರಿಯಾಗಿ ನಡೆಯುತ್ತಿವೆ..

ಚುನಾವಣೆ ಘೋಷಣೆಯಾಗೋಕೆ ಇನ್ನೂ ಒಂದು ತಿಂಗಳಿಗೂ ಹೆಚ್ಚು ಸಮಯ ಇದೆ… ಆದ್ರೆ, ಈಗ್ಲೇ ಅಭ್ಯರ್ಥಿಗಳು ಹಾಗೂ ಆಕಾಂಕ್ಷಿಗಳು ಹಣವನ್ನು ಚೆಲ್ಲಾಡುತ್ತಿದ್ದಾರೆ… ಕೋಟಿ ಕೋಟಿ ಹಣವನ್ನು ಸುರಿದು ಮತದಾರರನ್ನು ಓಲೈಸಿಕೊಳ್ಳೋ ಪ್ರಯತ್ನ ಮಾಡುತ್ತಿದ್ದಾರೆ… ಈಗಾಗಲೇ ಒಂದು ಅಂದಾಜಿನ ಪ್ರಕಾರ ಸರಾಸರಿ ಒಂದು ಕ್ಷೇತ್ರದಲ್ಲಿ ಮೂವತ್ತು ಕೋಟಿ ರೂಪಾಯಿಯಷ್ಟು ಹಣ ಖರ್ಚು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ… ಚುನಾವಣೆ ಮುಗಿಯುವಷ್ಟರಲ್ಲಿ ಪ್ರತಿ ಕ್ಷೇತ್ರದಲ್ಲಿ ಸರಾಸರಿ ನೂರು ಕೋಟಿ ರೂಪಾಯಿ ಹಣ ಖರ್ಚು ಮಾಡಬಹುದು ಎಂದು ಹೇಳಲಾಗುತ್ತಿದೆ…

ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೇಲೆ ಒಬ್ಬ ಅಭ್ಯರ್ಥಿ ಪ್ರಚಾರಕ್ಕಾಗಿ 28 ಲಕ್ಷ ರೂಪಾಯಿಗಿಂತ ಹೆಚ್ಚು ಖರ್ಚು ಮಾಡಬಾರದು… ಇದು ನಿಯಮ… ಆದ್ರೆ, ಕಾನೂನು ಪಾಲಿಸೋರು ಬಹುತೇಕ ಇಲ್ಲವೇ ಇಲ್ಲ… ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ, ಎಲ್ಲರ ಕಣ್ತಪ್ಪಿಸಿ ಮತದಾರರನ್ನು ಖರೀದಿಯನ್ನೇ ಮಾಡಿಬಿಡುತ್ತಾರೆ… ಒಂದು ಮತಕ್ಕೆ ನಾಲ್ಕೈದು ಸಾವಿರ ರೂಪಾಯಿಯವರೆಗೂ ಹಂಚುವವರಿದ್ದಾರೆ… ಆದ್ರೆ ಚುನಾವಣೆ ಸಮಯದಲ್ಲೇ ಎಲ್ಲವನ್ನೂ ಹಂಚೋದು ಕಷ್ಟವಾಗುತ್ತೆ ಅಂತ ಚುನಾವಣೆ ಘೋಷಣೆಗೂ ಮೊದಲೇ ಅಭ್ಯರ್ಥಿಗಳು ಹಾಗೂ ಆಕಾಂಕ್ಷಿಗಳು ಜನರ ಮನವೊಲಿಕೆಗೆ ಹಣವನ್ನು ನದಿಯಂತೆ ಹರಿಸುತ್ತಿದ್ದಾರೆ… ಸಮಾಜಸೇವೆ ಎಂಬ ಫೋಸ್‌ ಕೊಡುವ ರಾಜಕಾರಣಿಗಳು, ಚಾರಿಟಬಲ್‌ ಟ್ರಸ್ಟ್‌ ರಚನೆ ಮಾಡಿಕೊಂಡಿದ್ದಾರೆ… ಆ ಟ್ರಸ್ಟ್‌ ಮೂಲಕ ಜನರಿಗೆ ಹಣ ಹಂಚಲಾಗುತ್ತಿದೆ… ಈ ಮೂಲಕ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳೋ ಪ್ರಯತ್ನ ಮಾಡಲಾಗುತ್ತಿದೆ…

ಒಂದು ಅಂದಾಜಿನ ಪ್ರಕಾರ ಒಂದು ಕ್ಷೇತ್ರದಲ್ಲಿ ಪ್ರಮುಖ ಮೂವರು ಅಭ್ಯರ್ಥಿಗಳಿದ್ದಾರೆ ಎಂದರೆ ಸರಿಸುಮಾರು ಮೂವರೂ ಸೇರಿ ತಲಾ ೩೦ ಕೋಟಿ ರೂಪಾಯಿ ಖರ್ಚು ಮಾಡಬಹುದು ಎಂದು ಅಂದಾಜಿಸಲಾಗಿದೆ… ಹೀಗೆ ೨೨೪ ಕ್ಷೇತ್ರಗಳಲ್ಲಿ ಖರ್ಚಾಗುವ ಹಣವನ್ನು ಸರಿಸುಮಾರಾಗಿ ಲೆಕ್ಕ ಹಾಕಿದರೆ ಇಪ್ಪತ್ತೈದು ಸಾವಿರ ಕೋಟಿ ರೂಪಾಯಿಗೆ ಮೀರಬಹುದು ಎಂದು ಹೇಳಲಾಗುತ್ತಿದೆ… ಇಷ್ಟು ಹಣ ಮತದಾರರಿಗೆ ಬೇರೆ ಬೇರೆ ರೂಪದಲ್ಲಿ ಹೋಗುತ್ತಿದೆ… ಹೀಗೆ ಮಾಡೋದು ಕಾನೂನು ಪ್ರಕಾರ ಅಪರಾಧ… ಈ ರೀತಿ ಮಾಡಿ ಸಿಕ್ಕಿ ಹಾಕಿಕೊಂಡರೆ ಶಿಕ್ಷೆ, ದಂಡ ಎಲ್ಲವೂ ಇರುತ್ತೆ… ಆದ್ರೆ, ಕಾನೂನು ರೂಪಿಸುವ ಜವಾಬ್ದಾರಿ ಹೊರುವಂತಹ ರಾಜಕಾರಣಿಗಳೇ ತಾವೇ ರೂಪಿಸಿದ ಕಾನೂನನ್ನು ಉಲ್ಲಂಘಿಸುತ್ತಿದ್ದಾರೆ…

ಪ್ರಭಾವಿ ಶಾಸಕರನ್ನು ಪಕ್ಕಕ್ಕಿಡೋಣ.. ಒಬ್ಬ ಸಾಮಾನ್ಯ ಶಾಸಕ ಐದು ವರ್ಷ ಅಧಿಕಾರದಲ್ಲಿದ್ದರೂ ತಮ್ಮ ಕ್ಷೇತ್ರಕ್ಕೆ ನೂರು ಕೋಟಿ ರೂಪಾಯಿ ಅನುದಾನ ತರೋದಕ್ಕೆ ಆಗೋದಿಲ್ಲ… ಆದ್ರೆ, ವಿಪರ್ಯಾಸ ನೋಡಿ ಐದು ವರ್ಷದಲ್ಲಿ ತರೋದಕ್ಕೆ ಆಗದಷ್ಟು ಹಣವನ್ನು ಒಂದೆರಡು ತಿಂಗಳಲ್ಲಿ ಕ್ಷೇತ್ರದಲ್ಲಿ ಮತದಾರರಿಗೆ ಚೆಲ್ಲಾಡುತ್ತಾರೆ… ಇದೆಂಥಾ ಪ್ರಜಾಪ್ರಭುತ್ವ ಅಲ್ಲವೇ..?. ಎಲ್ಲಾ ರಾಜಕಾರಣಿಗಳು ಹಣ ಹಂಚುತ್ತಾರೆ… ಕೋಟಿ ಕೋಟಿ ಕಪ್ಪು ಹಣವನ್ನು ತಂದು ಖರ್ಚು ಮಾಡುತ್ತಾರೆ… ಆದ್ರೆ ಭಾಷಣದಲ್ಲಿ ಮಾತ್ರ ಸತ್ಯ ಹರಿಶ್ಚಂದ್ರರಂತೆ ಮಾತನಾಡುತ್ತಾರೆ…

Share Post