BengaluruPolitics

ಸಿಎಂ ಗಂಟುಮೂಟೆ ಕಟ್ಟಲಿ-ವಿಧಾನಸೌಧ ಗಂಜಲ ಹಾಕಿ ತೊಳೆಯುತ್ತೇವೆ: ಡಿಕೆ ಶಿ

ಬೆಂಗಳೂರು: ‘ಬಿಜೆಪಿ ಸರ್ಕಾರ ಇಡೀ ರಾಜ್ಯಕ್ಕೆ ಕಳಂಕ ತಂದಿದ್ದು, ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಅವರ ಮಂತ್ರಿಗಳು ವಿಧಾನಸೌಧದಿಂದ ತಮ್ಮ ಗಂಟು ಮೂಟೆ ಕಟ್ಟಿಕೊಂಡು ಹೊರಡಲಿ, ನಾವು ಗಂಜಲ ತಂದು ವಿಧಾನಸೌಧವನ್ನು ಶುದ್ಧ ಮಾಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಕೆಪಿಸಿಸಿ ಕಚೇರಿ ಹಾಗೂ ಸದಾಶಿವನಗರದ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು. ಬಿಜೆಪಿ ಸರ್ಕಾರ ಕಾಂಗ್ರೆಸ್ ವಿರುದ್ಧ ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;

‘ಕಾಂಗ್ರೆಸ್ ಪಕ್ಷ ಪ್ರಜಾಧ್ವನಿ ಯಾತ್ರೆ ಸಂದರ್ಭದಲ್ಲಿ ಎರಡು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದ್ದು, ಆಮೂಲಕ 200 ಯುನಿಟ್ ಉಚಿತ, 2 ಸಾವಿರ ಪ್ರೋತ್ಸಾಹ ಧನ ನೀಡುವುದು ಖಚಿತ ಎಂದು ಘೋಷಿಸಿದ ನಂತರ ಬಿಜೆಪಿಯವರ ತಲೆ ಕೆಟ್ಟು ಹೋಗಿದೆ. ಮಹಿಳೆಯರಿಗೆ ಪ್ರೋತ್ಸಾಹ ಧನದ ಮೂಲಕ ವರ್ಷಕ್ಕೆ 24 ಸಾವಿರ, 200 ಯುನಿಟ್ ಉಚಿತ ವಿದ್ಯುತ್ ಮೂಲಕ ವಿದ್ಯುತ್ ಮೂಲಕ ವರ್ಷಕ್ಕೆ 18 ಸಾವಿರ ರು. ಗೃಹಿಣಿಯರಿಗೆ ಉಳಿತಾಯವಾಗುತ್ತದೆ. ಇಂತಹ ದೊಡ್ಡ ಯೋಜನೆ, ಜನರ ಹೃದಯ ತಲುಪುವ ಯೋಜನೆ ಘೋಷಿಸಿರುವುದರ ಬಗ್ಗೆ ಸಂಕಟದಿಂದ ಅಪಸ್ವರ ಎತ್ತಿದ್ದಾರೆ. ಈ ಸರ್ಕಾರದ ಆಯಸ್ಸು ಇನ್ನು 40 ದಿನ ಇದೆ. ನೀವು ಇನ್ಯಾರಿಂದ ವಸೂಲಿ ಮಾಡುವುದು ಬಾಕಿ ಇದೆಯೋ ಅದನ್ನು ಮಾಡಿಕೊಂಡು ನಿಮ್ಮ ಟೆಂಟ್ ಖಾಲಿ ಮಾಡಿ. ನಾವು ಬಂದು ವಿಧಾನಸೌಧ ಸ್ವಚ್ಛ ಮಾಡುತ್ತೇವೆ. ಈ ಸರ್ಕಾರವನ್ನು ಜನರೇ ಓಡಿಸುತ್ತಾರೆ ಎಂದರು.

ಬಿಜೆಪಿ ಸರ್ಕಾರಕ್ಕೆ 40% ಕಮಿಷನ್ ಸರ್ಕಾರ ಎಂಬ ಬ್ರ್ಯಾಂಡ್ ಬಂದಿದ್ದು, ಅದನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಕಾಲದಲ್ಲಿ 35 ಸಾವಿರ ಕೋಟಿ ಅಕ್ರಮವಾಗಿದೆ ಎಂದು ಹೇಳಿಸಿದ್ದಾರೆ. ಈಗ ಆರೋಪ ಮಾಡುವವರು ಕಳೆದ ಮೂರುವರೆ ವರ್ಷಗಳಿಂದ ಕಡಲೇಕಾಯಿ ತಿನ್ನುತ್ತಿದ್ದರಾ? ನಿಮಗೆ ಅಧಿಕಾರ ಇದ್ದಾಗ ತನಿಖೆ ಮಾಡದಂತೆ ತಡೆದಿದ್ದವರು ಯಾರು? ನಿಮ್ಮ ಅಧಿಕಾರ ಉಪಯೋಗಿಸಿಕೊಂಡು ತನಿಖೆ ಮಾಡಿಸಿ ಜನರ ಮುಂದೆ ಸತ್ಯಾಸತ್ಯತೆ ಇಡಬೇಕಾಗಿತ್ತು. ಈ ಸರ್ಕಾರಕ್ಕೆ 40% ಕಮಿಷನ್ ಸರ್ಕಾರ ಎಂಬ ಬ್ರ್ಯಾಂಡ್ ಸಿಕ್ಕಿದೆ. ಅದನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ನೀವು ಹೇಳುವ 35 ಸಾವಿರ ಕೋಟಿ ಹಣ ನಮ್ಮ ನಾಯಕರ ಖಾತೆಗೆ ಬಂದಿದೆಯಾ? ವಿದೇಶಕ್ಕೆ ಹೋಗಿದೆಯಾ? ಹೇಳಿ. ಬಿಜೆಪಿಯವರು ಲಂಚ ತಿಂದು ಕಾಂಗ್ರೆಸ್ ಪಕ್ಷದ ಮೂತಿಗೆ ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಏನೂ ಆಗುವುದಿಲ್ಲ ಎಂದರು.

ಜನರ ಮನದಲ್ಲಿ ಕಾಂಗ್ರೆಸ್ ಬಗ್ಗೆ ಒಲವು ಮೂಡಿದೆ. ಬಿಜೆಪಿಯವರು, ಖಾಸಗಿ ಸಂಸ್ಥೆಗಳು, ಮಾಧ್ಯಮಗಳು ಸಮೀಕ್ಷೆಯಲ್ಲಿ ಬಿಜೆಪಿ ಸಂಖ್ಯಾಬಲ 60ರ ಮೇಲೆ ದಾಟುತ್ತಿಲ್ಲ. ನಮ್ಮದು 120-130 ಕ್ಷೇತ್ರಗಳು ಬರುತ್ತಿವೆ. ಇವು ನಿಜವಾಗುತ್ತದೋ ಸುಳ್ಳಾಗುತ್ತದೋ ಮುಂದಿನ ವಿಚಾರ. ಆದರೆ ಬಿಜೆಪಿಯವರಲ್ಲಿ ಯಡಿಯೂರಪ್ಪ- ಬೊಮ್ಮಾಯಿ, ಯತ್ನಾಳ್ – ನಿರಾಣಿ, ಯೋಗೇಶ್ವರ್, ಅಶೋಕ್, ಮಾಜಿ ಡಿಸಿಎಂ – ಹೀಗೆ ಬೇರೆ ಬೇರೆ ನಾಯಕರ ನಡುವೆ ಆಂತರಿಕ ಜಗಳ ಹೆಚ್ಚಾಗುತ್ತಿದೆ. ನಮ್ಮ ಪಕ್ಷದ ಆಂತರಿಕ ವಿಚಾರದ ಬಗ್ಗೆ ಮಾತನಾಡುತ್ತೀರಲ್ಲ, ಬಿಜೆಪಿ ಪಕ್ಷದಲ್ಲಿ 32 ಗುಂಪುಗಳಿವೆ. ಇವೆಲ್ಲವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಅವರುಗಳು ಬಹಿರಂಗವಾಗಿ ಮಾತನಾಡಲು ಹೆದರುತ್ತಿದ್ದಾರೆ. ಈ ಕಾರಣಕ್ಕೆ ನಮ್ಮ ಪಕ್ಷದಲ್ಲಿದ್ದ ಸುಧಾಕರ್ ಅವರಿಂದ ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿಸಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.

 

Share Post