Bengaluru

ಸ್ವದೇಶ್ ದರ್ಶನ್ 2.0 ಯೋಜನೆಗೆ ಕರ್ನಾಟಕ ಆಯ್ಕೆ

ಬೆಂಗಳೂರು: ವಿಶ್ವ ಭೂಪಟದಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಕರ್ನಾಟಕದ ಪ್ರವಾಸೋದ್ಯಮಕ್ಕೆ ಕೇಂದ್ರ ಸರ್ಕಾರ ಮತ್ತಷ್ಟು ಉತ್ತೇಜನ ನೀಡಲು ಮುಂದಾಗಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೇ ಯೋಜನೆಯಾದ ಸ್ವದೇಶ್ ದರ್ಶನ್ 2.0 ಗೆ ದೇಶದ 19 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಆಯ್ಕೆಯಾಗಿದೆ.

ದೇಶದಲ್ಲಿ ಪ್ರವಾಸೋದ್ಯಮವನ್ನ ಅಭಿವೃದ್ದಿ ಪಡಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಸ್ವದೇಶ್ ದರ್ಶನ್ 2.0 ಯೋಜನೆಯನ್ನ ಪ್ರಾರಂಭಿಸಿದೆ. ಈ ಯೋಜನೆಗೆ ದೇಶದ 19 ರಾಜ್ಯಗಳಲ್ಲಿ 36 ಸ್ಥಳಗಳನ್ನ ಆಯ್ಕೆ ಮಾಡಲಾಗಿದ್ದು ಕರ್ನಾಟಕದಲ್ಲಿ ಎರಡು ಸ್ಥಳಗಳನ್ನ ಆಯ್ಕೆ ಮಾಡಲಾಗಿದೆ.

ಈ ಯೋಜನೆಗೆ ಶಿಲ್ಪಕಲೆಗೆ ಹೆಸರಾದ ಹಂಪಿ ಮತ್ತು ಅರಮನೆ ನಗರಿ ಮೈಸೂರು ಸೇರ್ಪಡೆಗೊಂಡಿವೆ. ಈ ಮೂಲಕ ಪ್ರವಾಸೋದ್ಯಮದಲ್ಲಿ ಎರಡು ನಗರಗಳು ಮತ್ತಷ್ಟು ಅಭಿವೃದ್ದಿಯನ್ನ ಕಾಣಲಿವೆ.

ಏನಿದು ಸ್ವದೇಶ್ ದರ್ಶನ್ 2.0

ಸ್ವದೇಶ್ ದರ್ಶನ್ ಯೋಜನೆಯು ಪ್ರವಾಸೋದ್ಯಮ ಅಭಿವೃದ್ಧಿ ಪಥದಲ್ಲಿ ಹೊಸ ಮೈಲಿಗಲ್ಲಾಗಿದೆ. ಭಾರತದಲ್ಲಿ ಪ್ರೇಕ್ಷಣೀಯ ಸ್ಥಳಗಳ ಸಂಖ್ಯೆಗೆ ಕೊರತೆಯಿಲ್ಲ ಹೀಗಾಗಿ ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ್ ದರ್ಶನ್ ಯೋಜನೆ ಮಹತ್ವದ ಯೋಜನೆಗಳಲ್ಲಿ ಒಂದೆನಿಸಿದೆ. ವಿಭಿನ್ನ ವಿಷಯದ ಪ್ರವಾಸಿ ಸರ್ಕ್ಯೂಟ್‌ಗಳನ್ನು ಸಂಯೋಜಿಸುವ ಮೂಲಕ ಒಟ್ಟಾರೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕೇಂದ್ರ ಸರ್ಕಾರವು ಈ ಯೋಜನೆಯನ್ನು 2015 ರಲ್ಲಿ ಆರಂಭಿಸಿದೆ.

ಸ್ವದೇಶ್ ದರ್ಶನ್ 2.0 ಗೆ ಕರ್ನಾಟಕದ ಹಂಪಿ, ಮೈಸೂರು ಸೇರ್ಪಡೆಗೊಂಡಿರುವುದು ಸಂತಸ ತಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಸ್ವದೇಶ್ ದರ್ಶನ್ 2.0 ಗೆ ಹಂಪಿ, ಮೈಸೂರು ಸೇರ್ಪಡೆ ಕನ್ನಡಿಗರ ಹೆಮ್ಮೆಯ ವಿಷಯವಾಗಿದೆ ಎಂದು ಕೇಂದ್ರ ಸಚಿವ ಸದಾನಂದ ಅಭಿನಂದಿಸಿದ್ದಾರೆ.

Share Post