CrimeDistricts

ಸೆಪ್ಟೆಂಬರ್‌ 8ರಂದು ಮಂಗಳೂರು ರೌಂಡ್ಸ್‌ ಹಾಕಿದ್ದ ಶಾರೀಕ್‌; ಎಡಿಜಿಪಿ ಅಲೋಕ್‌ ಕುಮಾರ್‌

ಮಂಗಳೂರು; ಮಂಗಳೂರು ಆಟೋದಲ್ಲಿ ಸ್ಫೋಟ ಪ್ರಕರಣದ ಆರೋಪಿ ಶಾರೀಖ್‌ಗೆ ಉಗ್ರರ ನಂಟು ಇದೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 2020ರಲ್ಲೇ ಶಾರೀಖ್‌ ವಿರುದ್ಧ ಕೇಸ್‌ ಆಗಿತ್ತು. ಆಗಸ್ಟ್‌ 15ರಂದು ಶಿವಮೊಗ್ಗದಲ್ಲಿ ನಡೆದ ಗಲಭೆ ನಂತರ ಆತ ತಪ್ಪಿಸಿಕೊಂಡು ಓಡಾಡುತ್ತಿದ್ದ ಎಂದು ಹೇಳಿದ್ದಾರೆ.

ಶಾರೀಖ್‌ ಪೋಷಕರು ಆತನನ್ನು ಗುರುತಿಸಿದ್ದಾರೆ. ಆತನೇ ಶಾರೀಖ್‌ ಎಂದು ಖಚಿತಪಡಿಸಿದ್ದಾರೆ. ಆತನಿಗೆ ಈಗ ಚಿಕಿತ್ಸೆ ಅಗತ್ಯವಾಗಿದೆ. ಚಿಕಿತ್ಸೆಯ ನಂತರ ತೀವ್ರ ವಿಚಾರಣೆಗೊಳಪಡಿಸಲಾಗುತ್ತದೆ ಎಂದು ಅಲೋಕ್‌ಕುಮಾರ್‌ ತಿಳಿಸಿದ್ದಾರೆ. ಆಗಸ್ಟ್‌ 15ರಂದು ಶಿವಮೊಗ್ಗದಲ್ಲಿ ನಡೆದ ಗಲಭೆ ನಂತರ ಜಬೀವುಲ್ಲಾ ಎಂಬಾತನನ್ನು ಬಂಧಿಸಲಾಗಿತ್ತು. ಜಬೀವುಲ್ಲಾ ಬಂಧನವಾಗುತ್ತಿದ್ದಂತೆ ಶಾರೀಕ್‌ ಎಚ್ಚೆತ್ತುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದ. ಸೆಪ್ಟೆಂಬರ್‌ 8ರಂದು ಆತ ಮಂಗಳೂರಿಗೆ ಬಂದು ರೌಂಡ್ಸ್‌ ಹಾಕಿದ್ದ ಎಂಬ ಮಾಹಿತಿ ಸಿಕ್ಕಿದೆ ಎಂದು ಅಲೋಕ್‌ ಕುಮಾರ್‌ ಇದೇ ವೇಳೆ ತಿಳಿಸಿದ್ದಾರೆ.

ಶಾರೀಖ್‌ ಸೇರಿ ಹಲವರು ಜಾಗತಿಕ ಉಗ್ರ ಸಂಘಟನೆಯಿಂದ ಪ್ರೇರಿತರಾಗಿದ್ದರು. ಐಸಿಸ್‌ ಸೂಚನೆಯಂತೆಯೇ ಇವರೆಲ್ಲಾ ನಡೆದುಕೊಳ್ಳುತ್ತಿದ್ದರು. ಶಾರೀಖ್‌ ಬಾಂಬ್‌ ತೆಗೆದುಕೊಂಡು ಎಲ್ಲಿಗೆ ಹೋಗುತ್ತಿದ್ದ ಅನ್ನೋದು ಗೊತ್ತಿಲ್ಲ. ಆದ್ರೆ ದೊಡ್ಡ ಮಟ್ಟದ ಸಂಚು ನಡೆದಿತ್ತು ಅನ್ನೋದಂತೂ ಖಾತ್ರಿಯಾಗಿದೆ. ಶಾರೀಖ್‌ ನಂಟು ಹೊಂದಿದ್ದ ಮೈಸೂರಿನ ಇಬ್ಬರು ಹಾಗೂ ಮಂಗಳೂರಿನ ಒಬ್ಬನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದೂ ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಆಟೋ ಚಾಲಕ ಪುರುಷೋತ್ತಮ ಪೂಜಾರಿಗೆ ಗಾಯಗಳಾಗಿವೆ. ಅವರಿಗೆ ಉನ್ನತ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಇದೇ ವೇಳೆ ತಿಳಿಸಿದ್ದಾರೆ.

Share Post