ರಸ್ತೆ ಗುಂಡಿಗಳಲ್ಲಿ ದೀಪ ಹಚ್ಚಲು ಡಿ.ಕೆ.ಶಿವಕುಮಾರ್ ಕರೆ
ಬೆಂಗಳೂರು; ಬೆಂಗಳೂರು, ಮೈಸೂರು ಸೇರಿದಂತೆ ಪ್ರಮುಖ ನಗರಗಳದಲ್ಲಿ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿವೆ. ಇದ್ರಿಂದಾಗಿ ವಾಹನ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸರ್ಕಾರದ ಕಣ್ಣು ತೆರೆಸಲು ಕಾಂಗ್ರೆಸ್ ಪಕ್ಷ ಇಂದು ರಸ್ತೆಗಳ ಗುಂಡಿಗಳಲ್ಲಿ ದೀಪ ಹಚ್ಚಲು ತೀರ್ಮಾನಿಸಿದ್ದಾರೆ. ಇಂದು ಸಂಜೆ ಗುಂಡಿಗಳ ಸುತ್ತಲೂ ದೀಪ ಹಚ್ಚಿ ಸರ್ಕಾರ ಕಣ್ಣು ತೆರೆಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ನಿನ್ನೆ ಮೈಸೂರಿನಲ್ಲಿ ಸಾರ್ವಜನಿಕರು ಗುಂಡಿಗಳಲ್ಲಿ ದೀಪಗಳನ್ನು ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಾತನಾಡಿರುವ ಡಿ.ಕೆ.ಶಿವಕುಮಾರ್, ಜನರು ತಾವೇ ಮುಂದೆ ಬಂದು ಸರ್ಕಾರದ ಗಮನ ಸೆಳೆಯಬೇಕು. ಸಾರ್ವಜನಿಕರು, ಅಪಾರ್ಟ್‌ಮೆಂಟ್ ನಿವಾಸಿಗಳು ತಮ್ಮ ಮನೆಗಳ ಬಳಿಯ ರಸ್ತೆಗಳ ಗುಂಡಿಗಳಲ್ಲಿ ದೀಪ ಹಚ್ಚಿ, ಸರ್ಕಾರಕ್ಕೆ ಛೀಮಾರಿ ಹಾಕಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಬೈಕ್‌ನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ಬಸ್‌ಗೆ ಸಿಲುಕಿ ಸಾವನ್ನಪ್ಪಿದ್ದರು. ಇಂತಹ ಘಟನೆಗಳು ಆಗಾಗ ನಡೆಯುತ್ತಲೇ ಇವೆ. ಆದ್ರೂ ಬಿಬಿಎಂಪಿಯಾಗಲೀ, ರಾಜ್ಯ ಸರ್ಕಾರವಾಗಲೀ ಎಚ್ಚೆತ್ತುಕೊಂಡಿಲ್ಲ ಎಂದು ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.