ಸಾರಿಗೆ ಇಲಾಖೆ ಆದೇಶಕ್ಕೆ ಮಧ್ಯಂತರ ತಡೆ; ಓಲಾ, ಊಬರ್‌ಗೆ ಜಯ
ಬೆಂಗಳೂರು; ಓಲಾ, ಊಬರ್ ಮೇಲೇ ಸರ್ಕಾರ ಯಾವುದೇ ರೀತಿಯ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ. ಆಪ್ ಆಧಾರಿತ ಆಟೋ ಸೇವೆ ಸ್ಥಗಿತ ಮಾಡಬೇಕೆಂದು ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಹೀಗಾಗಿ ಓಲಾ, ಊಬರ್ ಕಂಪನಿಗಳು ಕೋರ್ಟ್ ಮೆಟ್ಟಿಲೇರಿದ್ದವು. ಇದೀಗ ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ಹೈಕೋರ್ಟ್‌ನ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಈ ವಿವಾದ ಸಂಬಂಧ ನಿನ್ನೆ ನಡೆದ ಸಭೆ ಕುರಿತು ನ್ಯಾಯಮೂರ್ತಿಗಳು ಮಾಹಿತಿ ಪಡೆದರು. ಓಲಾ ಹಾಗೂ ಊಬರ್ ಓಡಿಸದಂತೆ ಸಾರಿಗೆ ಇಲಾಖೆ ಕೈಗೊಂಡಿದ್ದ ಕ್ರಮದ ಬಗ್ಗೆ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಸಾರಿಗೆ ಇಲಾಖೆ ಕ್ರಮವನ್ನು ಏಕಸದಸ್ಯ ಪೀಠ ಪ್ರಶ್ನೆ ಮಾಡಿದ್ದು, ಸರ್ಕಾರ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೇಳಿತು. ಅಷ್ಟೇ ಅಲ್ಲದೇ ಓಲಾ, ಊಬರ್ ಕಂಪನಿಗಳು ಕೂಡಾ ಅನುಕೂಲಕರ ದರ ವಿಧಿಸಬೇಕು ಎಂದು ಹೇಳಿತು.
ಇನ್ನು ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ನಾವದಗಿ, ಪ್ರಕರಣದ ಬಗ್ಗೆ ಕೆಲವೊ೦ದು ವಿಚಾರ ಪ್ರಸ್ತಾಪ ಮಾಡಬೇಕು. ಇದಕ್ಕೆ ಕಾಲಾವಕಾಶ ಬೇಕೆಂದು ಕೇಳಿದರು. ಹೀಗಾಗಿ, ಕೋರ್ಟ್ ೧೨ ದಿನಗಳ ಕಾಲಾವಕಾಶ ನೀಡಿದೆ. ವಿಚಾರಣೆ ಮುಂದೂಡಿದೆ.